ಬೆಂಗಳೂರು: ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಇದಕ್ಕೆ ಪರಸ್ಪರ ಹೊಂದಾಣಿಕೆಯಿಂದ ಮೂರೂ ಇಲಾಖೆಗಳು ಕಾರ್ಯ ನಿರ್ವಹಿಸಿ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ನಡೆಸಲಾಯಿತು. ಆ ಸಭೆಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ.
• ಬಿಬಿಎಂಪಿಯಲ್ಲಿ ಸುಮಾರು 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿರುವುದಿಲ್ಲ. ಇದರಿಂದ ತೆರಿಗೆಯೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ. ತೆರಿಗೆ ಪ್ರತೀ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ.
• ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು 30 ಲಕ್ಷ ಆಸ್ತಿಗಳಿಗೆ ಖಾತೆಗಳು ಇರುವುದಿಲ್ಲ,
• ಗ್ರಾಮ ಪಂಚಾಯತ್‌ಗಳಲ್ಲಿ ಅಂದಾಜು 90 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿರುವುದಿಲ್ಲ.
• ಖಾತೆಯಿಲ್ಲದೆ, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಇದು ಸ್ಥಳೀಯ ಸಂಸ್ಥೆಗಳು ಮತ್ತು ನೋಂದಣಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
• ಸ್ಥಳೀಯ ಸಂಸ್ಥೆಗಳು ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಖಾತಾ ದಾಖಲೆಗಳ ಡಾಟಾಬೇಸ್ ಕಂಪ್ಯೂಟರ್‌ನಲ್ಲಿ ಇರಬೇಕು. ಈ ಡಾಟಾ ಬೇಸ್ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು.
• ನೋಂದಣಿ ಪ್ರಕ್ರಿಯೆ ಇಂಟಿಗ್ರೇಷನ್ ಆದ ಮೇಲೆ ಅಕ್ರಮಗಳ ಮೇಲೆ ಕಡಿವಾಣ ಸಾಧ್ಯವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒನ್ ಟೈಮ್ ಪರಿಹಾರ ನೀಡುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
• ಬಿಬಿಎಂಪಿಯಲ್ಲಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಹಾಕಬೇಕು. ಇದರಿಂದ ಖಾತೆ ಆದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು.
• ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ. ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
• ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳ ಡಿಜಿಟೈಸ್ ಮಾಡಲಾಗಿದೆ. ಈಗಾಗಲೇ 15 ಲಕ್ಷ ಖಾತೆಗಳನ್ನು ಡೌನ್‌ಲೋಡ್ ಮಾಡಲಾಗಿದೆ.
• ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನಕಲಿ ಖಾತೆಗಳನ್ನು ಸೃಜಿಸಿ ವಂಚನೆಯಿಂದ ಹೆಚ್ಚು ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು.
• ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಇರುವ ಅಂತಹ ಲೇಔಟ್‌ಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.
• ನಿವೇಶನಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿಗಣಿಸುವ ಕುರಿತು ಕ್ರಮ ಪರಿಶೀಲಿಸಬೇಕು.
• ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಇನ್ನಷ್ಟು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ.
• ಈ ವರ್ಷ ಡಿಸೆಂಬರ್ ಕೊನೆಗೆ ರೂ.16,993 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ.
• ಕಂದಾಯ ಇಲಾಖೆಯಲ್ಲಿ ಸರ್ವೇ ನಂಬರ್‌ಗಳಲ್ಲಿ ನಿರ್ಮಿಸಿದ ಅನಧಿಕೃತ ಬಡಾವಣೆಗಳು/ನಿವೇಶನಗಳ ದತ್ತಾಂಶ ಮಾಹಿತಿ ಇದ್ದು, ಸದರಿ ಮಾಹಿತಿಯನ್ನು ಆಧರಿಸಿ ಒಂದೇ ಯೋಜನೆಯಲ್ಲಿ ಸದರಿ ಸ್ವತ್ತುಗಳಿಗೆ ಖಾತಾ ದಾಖಲೆಗಳನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.
• ಗ್ರಾಮ ಪಂಚಾಯತ್‌ಗಳಲ್ಲಿ 44 ಲಕ್ಷ ಆಸ್ತಿಗಳಿಗೆ ಮಾತ್ರ ಖಾತೆಯಿದೆ. ಇದರಿಂದ 800 ಕೋಟಿ ರೂ. ಆದಾಯ ಪ್ರತಿ ವರ್ಷ ಬರುತ್ತಿದೆ. ಆದರೆ ಸುಮಾರು 96 ಲಕ್ಷ ಆಸ್ತಿಗಳಿಗೆ ಇನ್ನೂ ಈ ಖಾತಾ ಇರುವುದಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾತೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಸಲಹೆ ಮಾಡಿದರು.
‘ಭಾರತ್ ಮಾತಾ ದ್ವಾರ’ವೆಂದು ಇಂಡಿಯಾ ಗೇಟ್ ಮರುನಾಮಕರಣ? ಪ್ರಧಾನಿ ಮೋದಿಗೆ ಬಿಜೆಪಿ ಮುಖಂಡ ಪತ್ರ | India Gate
BREAKING: ವಂಚನೆ ಕೇಸಲ್ಲಿ ಐಶ್ವರ್ಯ ಗೌಡಗೆ ಹೈಕೋರ್ಟ್ ಜಾಮೀನು ಮಂಜೂರು