ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡ ಕಚೇರಿ) ಮಾತ್ರ ದೊರೆಯುತ್ತಿದ್ದ ಪ್ರಮುಖ ಸೇವೆಗಳು ಈಗ ನಿಮ್ಮ ಗ್ರಾಮದ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಲಭ್ಯವಿರಲಿವೆ.
ಮುಖ್ಯವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಪ್ರಮಾಣ ಪತ್ರಗಳಿಗೆ ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.
ಅಗತ್ಯವಿರುವ ದಾಖಲೆಗಳು:
ಅರ್ಜಿದಾರರು ಈ ಕೆಳಗಿನ ದಾಖಲೆಗಳೊಂದಿಗೆ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು:
ರೇಷನ್ ಕಾರ್ಡ್ (ಪಡಿತರ ಚೀಟಿ)
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ (Voter ID)
ಶಾಲಾ ವರ್ಗಾವಣೆ ಪ್ರಮಾಣ ಪತ್ರ (Transfer Certificate)
ವಂಶವೃಕ್ಷ (ಗ್ರಾಮ ಲೆಕ್ಕಿಗರಿಂದ ಪಡೆದದ್ದು – ಐಚ್ಛಿಕ)
ವೇತನ ಚೀಟಿ ಅಥವಾ ಆದಾಯ ತೆರಿಗೆ ಪಾವತಿ ದಾಖಲೆ (ಆದಾಯ ಪ್ರಮಾಣ ಪತ್ರಕ್ಕಾಗಿ)
ಕಾರ್ಯವಿಧಾನ ಹೇಗೆ?
ಅರ್ಜಿದಾರರು ಮೇಲ್ಕಂಡ ದಾಖಲೆಗಳೊಂದಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಗ್ರಾಮ ಲೆಕ್ಕಿಗರು (Village Accountant) ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ. ಈ ವರದಿಯನ್ನು ಕಂದಾಯ ನಿರೀಕ್ಷಕರು (Revenue Inspector) ಅನುಮೋದಿಸಿದ ಬಳಿಕ, ಅಧಿಕೃತ ಪ್ರಮಾಣ ಪತ್ರ ವಿತರಿಸಲಾಗುವುದು.
ಅರ್ಜಿ ಶುಲ್ಕ:
ಈ ಸೇವೆಗೆ ಸರ್ಕಾರ ಕೇವಲ ರೂ. 40/- ಗಳ ನಿಗದಿತ ಶುಲ್ಕವನ್ನು ನಿಗದಿಪಡಿಸಿದೆ.
ಗ್ರಾಮೀಣ ಜನರು ಇನ್ಮುಂದೆ ತಾಲ್ಲೂಕು ಕಚೇರಿ ಅಥವಾ ನಾಡ ಕಚೇರಿಗಳಿಗೆ ಅಲೆಯುವ ಅವಶ್ಯಕತೆಯಿಲ್ಲದೆ, ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಈ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಲಾಗಿದೆ.








