ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ ಎಸ್ ಎಲ್ ಸಿ ಮತ್ತು ಮೆಟ್ರಿಕ್ ನಂತ್ರದ ಪ್ರೋತ್ಸಾಹಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಣೆ ಮಾಡಿ, ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಇಲಾಖೆ ನೀಡುತ್ತಿದೆ ಎಂದಿದೆ.
ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.60ರಿಂದ 79ರಷ್ಟು ಅಂಕ ಪಡೆದವರಿಗೆ ರೂ.7,500 ಪ್ರೋತ್ಸಾಹಧನ ದೊರೆಯಲಿದೆ. ಶೇ.75ಕ್ಕಿಂತ ಹೆಚ್ಚು ತೆಗೆದವರಿಗೆ ರೂ.15,000 ನೀಡಲಾಗುತ್ತದೆ. ಪಿಯುಸಿ, ಡಿಪ್ಲೋಮಾಗೆ ರೂ.20,000, ಪದವಿ ವಿದ್ಯಾರ್ಥಿಗಳಿಗೆ ರೂ.25,000, ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ರೂ.30,000 ಹಾಗೂ ವೃತ್ತಿಪರ ಪದವಿ, ವೈದ್ಯಕೀಯ, ತಾಂತ್ರಿಕ, ಕೃಷಿ, ಪಶು ವೈದ್ಯಕೀಯ ವ್ಯಾಸಂಗದವರಿಗೆ ರೂ.35,000 ಪ್ರೋತ್ಸಾಹಧನ ನೀಡುತ್ತಿರುವುದಾಗಿ ತಿಳಿಸಿದೆ.
ಎಸ್ ಎಸ್ ಎಲ್ ಸಿ ಮತ್ತು ಮೆಟ್ರಿಕ್ ನಂತರದ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 28-02-2026ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ತಪ್ಪದೇ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಕೋರಿದೆ.








