ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಶಾಲಾ ಸಮಯದಲ್ಲಿ ಮಕ್ಕಳಿಗೆ ನಿಗದಿಪಡಿಸಿರುವ ಆಟದ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಟದ ಅವಧಿ ಕಡಿತಗೊಳಿಸದಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಎಸ್ ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ನೀಡುವ ಉದ್ದೇಶದಿಂದ 10ನೇ ತರಗತಿ ಮಕ್ಕಳ ಆಟದ ಸಮಯ ಕಡಿತಗೊಳಿಸಲಾಗುತ್ತಿದೆ ಎಂದು ಬಂದ ದೂರು ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಶಾಲೆಗಳಿಗೆ ಈ ಸೂಚನೆ ನೀಡಿದೆ.
ಶಾಲೆಗಳಲ್ಲಿ ಆಟ, ಕಲೆ ಮತ್ತು ಇನ್ನಿತರ ಪತ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವೈಯಕ್ತಿಕ ವಿಕಾಸದ ಅವಿಭಾಜ್ಯ ಅಂಗವಾಗಿದ್ದು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಪ್ರಕಾರ, ಆಟ ಮಕ್ಕಳ ಹಕ್ಕು ಅದನ್ನು ನಿರ್ಬಂಧಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.








