ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೂ ʼಆಟ ಆಧಾರಿತ ಗಣಿತ ಪಠ್ಯಕ್ರಮʼ ಪರಿಚಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಬುನಾದಿ ಹಂತದಿಂದಲೇ ಕಲಿಕೆ ಮತ್ತು ಬೋಧನೆಯ ಗುಣಮಟ್ಟ ಸುಧಾರಿಸಲು, ನಾವೀನ್ಯತೆಗೆ ಒತ್ತು ನೀಡಲು ಶಿಕ್ಷಣ ಇಲಾಖೆ ʼಜೆ-ಪಿಎಎಲ್ ದಕ್ಷಿಣ ಏಷ್ಯಾʼ ಜೊತೆ ಬುಧವಾರ ಒಪ್ಪಂದ ಮಾಡಿಕೊಂಡಿದೆ.
ಮೊದಲ ಹಂತದಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಗಣಿತ ಕಲಿಕೆಗೆ ‘ಚಿಲಿ-ಪಿಲಿ’ ಪರಿಚಯ, 6, 7 ಮತ್ತು 8ನೇ ತರಗತಿಗಳಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆಗೆ ‘ಮರು ಸಿಂಚನ’ ಹಾಗೂ 3ರಿಂದ 8ನೇ ತಗರತಿಯ ಮಕ್ಕಳಿಗೆ ‘ಗಣಿತ–ಗಣಕ’ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವು ದೊರೆಯಲಿದೆ.
ಸರ್ಕಾರಿ ಶಾಲೆಯ ಶಿಕ್ಷಕರಿಗೆ ವಾರಕ್ಕೆ ಒಂದು ದಿನ ಕನಿಷ್ಠ 45 ನಿಮಿಷ ಮೊಬೈಲ್ ಫೋನ್‌ಗಳ ಮೂಲಕ ವಿಶೇಷ ತರಗತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಕಲ್ಪನೆಗಳನ್ನು ವಿವರಿಸಲು, ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಸಂಸ್ಥೆಯ ಪ್ರತಿನಿಧಿಗಳು ನೆರವಾಗಲಿದ್ದಾರೆ.