ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ವಾರದ 6 ದಿನವೂ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 25 ರಂದು ಚಾಲನೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಮೊಟ್ಟೆಯನ್ನು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಕಾರದೊಂದಿಗೆ ವಾರದ ಆರು ದಿನ ವಿತರಿಸುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 25 ರಂದು ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ʼನಮ್ಮ ಶಾಲೆ ನಮ್ಮ ಜವಾಬ್ದಾರಿʼ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಉದ್ಯೋಗಿಗಳು, ಉದ್ಯಮಿಗಳು, ಪಾಲಕರು ಮತ್ತು ಹಳೆ ವಿದ್ಯಾರ್ಥಿಗಳು ಶಾಲೆಗೆ ದೇಣಿಗೆ ನೀಡಿ ಪ್ರಗತಿಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿವೆ. 56 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಿಯು ವಿದ್ಯಾರ್ಥಿಗಳೂ ಸೇರಿ ಒಟ್ಟು 1.05 ಕೋಟಿ ವಿದ್ಯಾರ್ಥಿಗಳಿದ್ದಾರೆ. ಕಳೆದ ದಶಕಗಳಲ್ಲಿ ಇಲ್ಲಿ ಕಲಿತು ಹೋದವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಅವರು ತಾವು ಕಲಿತ ಶಾಲೆಗಳಿಗೆ ಮರಳಬೇಕು. ಕನಿಷ್ಠ ₹5 ಸಾವಿರ ದೇಣಿಗೆ ನೀಡಬೇಕು ಅಥವಾ ಇಷ್ಟವಾದುದ್ದನ್ನು ಕೊಡುಗೆ ನೀಡಬೇಕು. ಇದರಿಂದ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.