ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಿಸಲು ಮುಂದಾಗಿದೆ.
ಹೌದು, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿ ಮಕ್ಕಳಿಗೆ ರಾಗಿ ಹೆಲ್ತ್ ಮಿಕ್ಸ್ ಪುಡಿ ಮಿಶ್ರಿತ ಬಿಸಿ ಹಾಲು ನೀಡುವ ಕಾರ್ಯಕ್ರಮವನ್ನು ವಾರದಲ್ಲಿ 5 ದಿನಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದಂತೆ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕ್ಷೀರಭಾಗ್ಯ ಹಾಲಿನ ಜೊತೆ ರಾಗಿ ಹೆಲ್ತ್ ಮಿಕ್ಸ್ ನೀಡಲು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮಕ್ಕಳಿಗೆ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ನಿಂದ ವಾರದಲ್ಲಿ ಮೂರು ದಿನ ಕ್ಷೀರ ಭಾಗ್ಯ ಯೋಜನೆಯ ಬಿಸಿ ಹಾಲಿನ ಜತೆಗೆ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿ ವಿತರಿಸಲಾಗುತ್ತಿದ್ದ, ಇನ್ಮುಂದೆ ವಾರದಲ್ಲಿ 5 ದಿನ 1-10ನೇ ತರಗತಿ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲು ಆದೇಶ ಹೊರಡಿಸಲಾಗಿದೆ.








