ಬೆಂಗಳೂರು : ಗರ್ಭಿಣಿ ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಯಡಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕøತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನೋಂದಣಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆ ಮಾಹಿತಿಯ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್(ಯಾವುದಾದರು ಪ್ರತಿ) ಸಲ್ಲಿಸಬೇಕು.
ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನ ರೂಪದಲ್ಲಿ ವೇತನ ನಷ್ಟಕ್ಕಾಗಿ ನೀಡುವುದಾಗಿದೆ.
ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ರೂ. 5000, ಎರಡನೇ ಮಗು (ಹೆಣ್ಣು ಮಗುವಾಗಿರುವುದಕ್ಕೆ) ರೂ. 6000 ನೀಡಲಾಗುವುದು. ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಮೊದಲ ಪ್ರಸವದ ಗರ್ಭಿಣಿ ಮತ್ತು ಎರಡನೇ ಹೆಣ್ಣು ಮಗುವಿನ ಬಾಣಂತಿಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಹಾಗೂ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.