ಬೆಂಗಳೂರು: ರಾಜ್ಯದ ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ ಎನ್ನುವಂತೆ ಪ್ರತಿ ಹೋಬಳಿಯಲ್ಲಿ ವಸತಿ ಶಾಲೆ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ನಾನು ಹಣಕಾಸು ಮಂತ್ರಿಯಾಗಿದ್ದಾಗ , ದಲಿತ ಸಂಘರ್ಷ ಸಮಿತಿಯವರು ಸಾರಾಯಿ ಅಂಗಡಿ ಬೇಡ, ಮಕ್ಕಳಿಗೆ ವಸತಿ ಶಾಲೆ ನಿರ್ಮಾಣವಾಗಬೇಕೆಂಬ ಬೇಡಿಕೆಯನ್ನಾಧರಿಸಿ, 1994-95 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಯಿತು. ಹೋಬಳಿಗೊಂದು ವಸತಿ ಶಾಲೆ ಯೋಜನೆಯಂತೆ ರಾಜ್ಯದಲ್ಲಿ ಒಟ್ಟು 822 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ ಎಂದರು.
ಈ ವರ್ಷ 20 ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಳ್ಳಿಗಾಡಿನ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮುಂದಿನ ವರ್ಷದೊಳಗೆ ಉಳಿದೆಲ್ಲ ಹೋಬಳಿಗಳಲ್ಲೂ ರಾಜ್ಯದ ಪ್ರತಿ ಹೋಬಳಿಯಲ್ಲಿ ಒಂದು ವಸತಿ ಶಾಲೆ ನಿರ್ಮಿಸುವ ಗುರಿಯನ್ನು ಸಾಧಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಹತ್ತನೆ ತರಗತಿಯಲ್ಲಿ ಓದುವ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮ, ಬಡಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.