ತಿರುವನಂತಪುರಂ : ಕೇರಳ ಬಸ್ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸಿದ್ದು, ಇನ್ಮುಂದೆ ಫೋನ್ ಪೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು..
ಪ್ರತಿನಿತ್ಯ ಸಾವಿರಾರು ಕೆಎಸ್ಆರ್ಟಿಸಿ ಬಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತ ಇರುತ್ತವೆ. ಇಂತಹ ಸಮಯದಲ್ಲಿ ಎಲ್ಲರಿಗೂ ಟಿಕೆಟ್ ನೀಡುವುದು, ಚಿಲ್ಲರೆ ನೀಡುವುದು ಕಂಡಕ್ಟರ್ಗಳಿಗೆ ತಲೆನೋವಾಗಿರುತ್ತದೆ. ಚಿಲ್ಲರೆ ಇದ್ದರೆ ಮಾತ್ರ ಬಸ್ ಹತ್ತಿ ಎನ್ನುವ ಮಾತುಗಳು ಕೂಡ ಸಾಮಾನ್ಯವಾಗಿ ಕೇಳಿದ್ದೇವೆ. ಈ ಬೆನ್ನಲ್ಲೆ ಇದೀಗ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಪ್ರಯಾಣಿಕರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ.
ಆ್ಯಂಡ್ರಾಯ್ಡ್ ತಂತ್ರಜ್ಞಾನವನ್ನು ಹೊಂದಿರುವ ಹೊಸ ಟಿಕೆಟ್ ಯಂತ್ರವು ಟಚ್ ಸ್ಕ್ರೀನ್ ತಂತ್ರಜ್ಞಾನವನ್ನು ಬಸ್ಗಳಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಇನ್ಮುಂದೆ ಪ್ರಯಾಣಿಕರು ಫೋನ್ ಪೇ ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಿದೆ. ಈ ಸೌಲಭ್ಯವನ್ನು ಇದೀಗ ಆರಂಭದಲ್ಲಿ ಸೂಪರ್ ಕ್ಲಾಸ್ ಬಸ್ಗಳಲ್ಲಿ ಮಾತ್ರ ಅಳವಡಿಸಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ
ಈ ಬಗ್ಗೆ ಕೇರಳ ಸರ್ಕಾರದ ಸಾರಿಗೆ ಸಚಿವರಾದ ಆಂಟನಿ ರಾಜು ಅವರು ಮಾಹಿತಿಯನ್ನು ನೀಡಿದ್ದಾರೆ. ಅವರು ಡಿಸೆಂಬರ್ 28ರಂದು ಮೊದಲ ಟಿಕೆಟ್ ತೆಗೆದುಕೊಳ್ಳುವ ಮೂಲಕ ಡಿಜಿಟಲ್ ಪಾವತಿ ಸೌಲಭ್ಯವನ್ನು ಉದ್ಘಾಟಿಸಿದರು. ಹಾಗೆಯೇ ಈ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಗಳಲ್ಲಿಯೂ ಜಾರಿಗೆ ತರಲಾಗುವುದು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.