ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾಗಿ ಸಾವಿರಾರು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತ ಸರ್ಕಾರಕ್ಕೆ ಮನವಿ ಮಾಡಿದ್ದರು. ಈಗ ವಾರ್ಷಿಕ ವೇತನ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರವು ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಈ ಮೂಲಕ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಸಮುದಾಯ ಆರೋಗ್ಯ ಅಧಿಕಾರಿ ( Community Health Officer – CHO)ಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಸಾರ್ವತ್ರಿಕ ಆರೋಗ್ಯ ಪಾಲನೆಯಡಿ (ಯುಹೆಚ್‌ಸಿ) ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು (ಸಿಪಿಹೆಚ್‌ಸಿ) ಆಯುಷ್ಮಾನ್ ಆರೋಗ್ಯ ಮಂದಿರಗಳ ಮುಖೇನ ನೀಡಲಾಗುತ್ತಿದೆ. ಈ ಕೇಂದ್ರಗಳು ಸಮಾಜದ ಎಲ್ಲಾ ವರ್ಗಕ್ಕೆ ಸಾಕಷ್ಟು ಪ್ರಮಾಣದ ಆರೋಗ್ಯ ರಕ್ಷಣಾ ಸೇವೆಗಳನ್ನು ಮುಟ್ಟಲು ಪೂರಕವಾದ ಅನುಷ್ಠಾನ ಕ್ರಮಗಳನ್ನು ರೂಪಿಸಿ, ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಿ, ಗರಿಷ್ಟ ಪ್ರಮಾಣದಲ್ಲಿ ಉಚಿತ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು ಖಾತ್ರಿಪಡಿಸುವುದು ಹಾಗೂ ಸಮುದಾಯದ ಮನೆಬಾಗಿಲಿಗೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳನ್ನು ತಲುಪಿಸಿ, ಕುಟುಂಬಗಳು ಆರೋಗ್ಯ ರಕ್ಷಣೆಗೆ ಖರ್ಚು ಮಾಡುತ್ತಿರುವ ಸ್ವಂತ ಹಣದ ಪ್ರಮಾಣವನ್ನು ತಗ್ಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
ದಿನಾಂಕ 13.02.2024 ರಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸಮುದಾಯ ಆರೋಗ್ಯ ಅಧಿಕಾರಿಗಳ ರಾಜ್ಯ ಸಂಘದ ಪದಾಧಿಕಾರಿಗಳೊಂದಿಗೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿ, ಪ್ರಮುಖ ಬೇಡಿಕೆಗಳ ಕುರಿತು ತೆಗೆದುಕೊಂಡ ನಿರ್ಧಾರಗಳು ಈ ಕೆಳಕಂಡಂತಿದೆ:
1. ರಾಜ್ಯ ಸಂಘದ ಪದಾಧಿಕಾರಿಗಳು ಆರ್ಥಿಕ ವರ್ಷ 2022-23 ಮತ್ತು 2023-24 ನೇ ಸಾಲಿನ 5% ವಾರ್ಷಿಕ ಹೆಚ್ಚಳವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗಳಿಗೆ ನೀಡಿದ್ದು, ಕೇವಲ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ನೀಡಿರುವುದಿಲ್ಲವೆಂದು ತಿಳಿಸುತ್ತಾ, ತುರ್ತಾಗಿ ಕ್ರಮ ಜರುಗಿಸುವಂತೆ ಕೋರಿದಾಗ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು 2023-24 ನೇ ಸಾಲಿನ 5% ವಾರ್ಷಿಕ ಹೆಚ್ಚಳವನ್ನು ನೀಡಲು ತಾತ್ವಿಕ ಒಪ್ಪಿಗೆ ನೀಡಿದರು.
2. ರಾಜ್ಯ ಸಂಘದ ಪದಾಧಿಕಾರಿಗಳು ಪ್ರೋತ್ಸಾಹ ಧನವನ್ನು ರೂ.8000/- ದಿಂದ ರೂ.15,000/- ಕ್ಕೆ ಹೆಚ್ಚಿಸುವುದು ಮತ್ತು ಭಾರತ ಸರ್ಕಾರದ ಮಾರ್ಗಸೂಚಿಯಂತೆ 6 ವರ್ಷ ಪೂರೈಸಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂಗೊಳಿಸುವಂತೆ ಕೋರಿದಾಗ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇತರೆ ರಾಜ್ಯಗಳಲ್ಲಿರುವ ಅನುಷ್ಟಾನದ ವರದಿಯನ್ನು ಪಡೆಯಲು ಕರ್ನಾಟಕ ರಾಜ್ಯದಿಂದ 4 ತಂಡಗಳನ್ನು ರಚಿಸಲಾಗಿದ್ದು, ಮುಂದಿನ ವಾರ ಒಡಿಸ್ಸಾ, ರಾಜಸ್ಥಾನ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಲು ಕ್ರಮವಹಿಸಲಾಗಿದ್ದು, ಸದರಿ ತಂಡಗಳು ನೀಡುವ ವರದಿ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿಗಳು ಸಮುದಾಯಕ್ಕೆ 12 ವಿಸ್ತ್ರತ ಆರೋಗ್ಯ ಸೇವೆಯನ್ನು ನೀಡುತ್ತಿದ್ದು, ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ರೋಗ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡಿ, ಮರಣ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ಜನ ಸಾಮಾನ್ಯರ ಆರ್ಥಿಕ ಹೊರೆ ಕಡಿಮೆ ಮಾಡಲು (Out of Pocket Expenditure) ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶಂಶಿಸುತ್ತಾ, ಅವರ ಇತರೆ ಬೇಡಿಕೆಗಳನ್ನು ನಿಯಮಾನುಸಾರ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.