ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದ್ದು, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮಾಸಿಕ 15 ರಿಂದ 19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಅತಿಥಿ ಉಪನ್ಯಾಸಕರ ಈ ಸಾಂದರ್ಭಿಕ ರಜೆ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.ಇದಕ್ಕೆ ಆಕ್ಷೇಪಿಸಿರುವ ಅತಿಥಿ ಉಪನ್ಯಾಸಕರು ರಜೆ ದಿನದ ಕಾರ್ಯಭಾರ ಬೇರೆ ದಿನ ಸರಿದೂಗಿಸಬೇಕು ಎನ್ನುವುದಾದರೆ ಅದು ರಜೆ ಹೇಗಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಷರತ್ತು ರಹಿತವಾಗಿ ಬೇಡಿಕೆ ಈಡೇರಿಸಲು ಸಿದ್ಧವಾಗಿದ್ದರೂ ಅಧಿಕಾರಿಗಳು ಬಿಡುತ್ತಿಲ್ಲ. ಅನಗತ್ಯ ಸಲಹೆ ನೀಡಿ ಅನುಕೂಲವಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.