ಬೆಂಗಳೂರು: ರಾಜ್ಯದ 16,500 ಸರ್ಕಾರಿ ವಸತಿ ಶಾಲೆಗಳಿಗೆ ಹೊಸ ಪಾತ್ರೆ ನೀಡುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಕಲಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗುತ್ತದೆ. ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿಯೂ ಹೇಳಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಿಳಾಗಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ನವರು ಇಂದು ಶನಿವಾರ ಉದ್ಘಾಟಿಸಿದರು. ಈ ಬಳಿಕ ಮಾತನಾಡಿದರು.
ಆರೋಗ್ಯದ ದೃಷ್ಟಿಯಿಂದ ಹೊಸ ಅಡುಗೆ ಪಾತ್ರೆಗಳು:
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾ ಅಡುಗೆಯಲ್ಲಿ ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ನಿಲ್ಲಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯದ 16,500 ಸರ್ಕಾರಿ ಶಾಲೆಗಳಿಗೆ ಹೊಸ ಅಡುಗೆ ಪಾತ್ರೆಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ನೀಡಿ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಆಹಾರ ತಯಾರಿಸುವುದು ಒಳ್ಳೆಯದಲ್ಲ, ಹಾಗಾಗಿ ಹಳೆಯ ಪಾತ್ರೆಗಳನ್ನ ಬದಲಾಯಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ಪ್ರಯತ್ನ:
ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಮನೋಭಾವವನ್ನು ಹೆಚ್ಚಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ದೇವಸ್ಥಾನಗಳಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕ ಮಹಾನ್ ವ್ಯಕ್ತಿಗಳು ರಾಜ್ಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ತಮ್ಮ ತಂದೆ ಬಂಗಾರಪ್ಪನವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಎಂದು ಅವರು ಸ್ಮರಿಸಿದರು.
ಎಲ್.ಕೆ.ಜಿ. ಶಾಲೆಗಳ ಪ್ರಾರಂಭ:
ಮುಂದಿನ ದಿನಗಳಲ್ಲಿ ಎಲ್.ಕೆ.ಜಿ. ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಅಂಗನವಾಡಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಈ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಉಚಿತ ವಿದ್ಯುತ್ ಸೌಲಭ್ಯ:
ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಟಿವಿಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸುಮಾರು 46,000 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ.
ಇದರಿಂದ ಮಕ್ಕಳು ಸ್ಮಾರ್ಟ್ ಕ್ಲಾಸ್ ಗಳ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಸಚಿವರು ಹೇಳಿದರು.
ತಂದೆಯವರ ಶಾಲೆಗೆ ನೆರವು:
ತಮ್ಮ ತಂದೆ ಬಂಗಾರಪ್ಪನವರು ಓದಿದ ಸರ್ಕಾರಿ ಶಾಲೆಗೆ ತಮ್ಮ ಸಂಬಳದಿಂದ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾಗಿ ಸಚಿವರು ತಿಳಿಸಿದರು.
ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಓದಿದ ಎರಡು ಸರ್ಕಾರಿ ಶಾಲೆಗಳಿಗೂ ತಲಾ 10 ಲಕ್ಷ ರೂಪಾಯಿಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ:
ಜನರಿಗೆ ಅನುಕೂಲವಾಗುವಂತೆ ಈ ವರ್ಷ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ:
ಈ ಬಾರಿ ಪರೀಕ್ಷೆಗಳಲ್ಲಿ ನಕಲು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಉತ್ತೀರ್ಣ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೆ ಮಕ್ಕಳ ಗುಣಮಟ್ಟ ಹೆಚ್ಚಾಗಬೇಕು ಎಂಬುದು ಸರ್ಕಾರದ ಉದ್ದೇಶ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮಾದರಿಯನ್ನು ದೇಶದ ಹಲವು ರಾಜ್ಯಗಳು ಅನುಸರಿಸುತ್ತಿವೆ ಎಂದು ಸಚಿವರು ಹೇಳಿದರು.
ಪೋಷಕರಿಗೆ ಕರೆ:
ಪೋಷಕರು ತಮ್ಮ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸಬೇಕು ಮತ್ತು ಅವರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು. ಒಂದು ದಿನ ಶಾಲೆಗೆ ಗೈರು ಹಾಜರಾದರೆ, ಆ ದಿನವನ್ನು ಮಗು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರೇಪಿಸಬೇಕು ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಎಂದು ಸಚಿವರು ತಿಳಿಸಿದರು.
ಡಗ್ಸ್ ಪ್ರಕರಣದಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್ | Actor Shine Tom Chacko
Online Scam: ನಕಲಿ ವೆಬ್ಸೈಟ್ ಲಿಂಕ್ ಗಳ ಬಗ್ಗೆ ಜಾಗರೂಕರಾಗಿರಲು ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಸೂಚನೆ