ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ (2026-27) ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಕಲಿಕೆಯನ್ನು ಕಡ್ಡಾಯಗೊಳಿಸಲು ಇಲಾಖೆ ತೀರ್ಮಾನಿಸಿದೆ.
ರಾಜ್ಯದ ಸರ್ಕಾರಿ ಪ್ರೌಢಶಾಲೆ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.ಈ ಕಾರ್ಯಕ್ರಮಕ್ಕಾಗಿ 2026-27ನೇ ಸಾಲಿನ ಬಜೆಟ್‌ನಲ್ಲಿ ₹5 ಕೋಟಿ ಹಣವನ್ನು ಮೀಸಲಿಡಲಾಗಿದೆ.ಈ ಯೋಜನೆಯನ್ನು ಜಾರಿಗೆ ತರಲು ಐಐಟಿ ಧಾರವಾಡ (IIT Dharwad) ಸಹಯೋಗವನ್ನು ಪಡೆಯಲಾಗುತ್ತಿದೆ. ಇಲ್ಲಿನ ತಜ್ಞರು ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಲು ಮಾರ್ಗದರ್ಶನ ನೀಡಲಿದ್ದಾರೆ.
ಏನೇನು ಕಲಿಯಲಿದ್ದಾರೆ ವಿದ್ಯಾರ್ಥಿಗಳು?
ಕೇವಲ ಸಿದ್ಧಾಂತವಲ್ಲದೆ, ಪ್ರಾಯೋಗಿಕವಾಗಿಯೂ ಎಐ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಇಲಾಖೆಯ ಉದ್ದೇಶವಾಗಿದೆ.
ದೈನಂದಿನ ಜೀವನದಲ್ಲಿ ಎಐ ಬಳಕೆ.
ಸಮಸ್ಯೆ ಪರಿಹರಿಸುವ ಕೌಶಲ (Problem Solving).
ಅಲ್ಗಾರಿದಂ ಮತ್ತು ಕೋಡಿಂಗ್ ರಹಿತ ತಂತ್ರಜ್ಞಾನದ ಪರಿಚಯ.
ಪ್ರತ್ಯೇಕ ಪಠ್ಯಕ್ರಮದ ಮೂಲಕ ಸುಲಭ ಕಲಿಕೆ.
ಡಿಜಿಟಲ್ ಟ್ಯೂಟರ್ ಮತ್ತು ದೀಕ್ಷಾ ವೇದಿಕೆ:
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT) ತನ್ನ ‘ದೀಕ್ಷಾ’ ವೇದಿಕೆಯಲ್ಲಿ ಎಐ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಒಟ್ಟು 22 ಭಾಷೆಗಳಲ್ಲಿ ಲಭ್ಯವಿರಲಿದೆ. ವಿದ್ಯಾರ್ಥಿಗಳು ಡಿಜಿಟಲ್ ಟ್ಯೂಟರ್‌ಗಳ ಮೂಲಕ ಸ್ವಯಂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು.
‘ಕಲಿಕಾ ದೀಪ’ ಯೋಜನೆಯ ಯಶಸ್ಸು:
ಈಗಾಗಲೇ 4 ರಿಂದ 6ನೇ ತರಗತಿಯ ಮಕ್ಕಳಿಗೆ ಗಣಿತ, ಇಂಗ್ಲಿಷ್ ಮತ್ತು ಕನ್ನಡ ಕಲಿಸಲು ‘ಕಲಿಕಾ ದೀಪ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಈಗ ಹಿರಿಯ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.








