ಬೆಂಗಳೂರು: ರಾಜ್ಯದಲ್ಲಿನ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು. ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಕೌಜಲಗಿ ಮಹಾಂತೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹೆಸ್ಕಾಂ ಕಂಪನಿಯಲ್ಲಿ 1,635 ಪಂಪ್ಸೆಟ್ ಮಾರ್ಗಗಳ ಮೇಲೆ 1.29 ಲಕ್ಷ ರೈತರ ಮನೆಗಳು ಬರುತ್ತಿದ್ದು, ಈ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಂದಾಜು 712 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದೆ.
ಈ ಸಮಸ್ಯೆ ಬಗೆಹರಿಸಲು ಪ್ರಾಯೋಗಿಕವಾಗಿ ಹೆಸ್ಕಾಂ ವ್ಯಾಪ್ತಿಯ 5 ವಿಭಾಗಗಳಲ್ಲಿ 13 ಪಂಪ್ಸೆಟ್ ಮಾರ್ಗಗಳ ಮೇಲೆ ಬರುವ ಮನೆಗಳಿಗೆ 16 ಕೆ.ವಿ.ಎ ಸಿಂಗಲ್ ಫೇಸ್ ಪರಿವರ್ತಕಗಳನ್ನು ಅಳವಡಿಸಿ ವಿದ್ಯುತ್ ಪೂರೈಸಲು ರೂ. 503.43 ಲಕ್ಷ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡುವ ಹಂತದಲ್ಲಿದೆ ಎಂದರು.
ಜೆಸ್ಕಾಂ ವ್ಯಾಪ್ತಿಯ ತೋಟದ ಮನೆಗಳಿಗೆ ಸಿಂಗಲ್ ಫೇಸ್ ಟ್ರಾನ್ಸ್ಫಾರ್ಮರ್ ಮೂಲಕ ವಿದ್ಯುತ್ ಪೂರೈಸುವ ಸಂಬಂಧ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅಂದಾಜು ವೆಚ್ಚ ರೂ. 128.42 ಕೋಟಿಗಳಾಗಿದ್ದು, ಪ್ರಸ್ತಾವನೆಯು ಪರಿಶೀಲನೆಯ ಹಂತದಲ್ಲಿದೆ ಎಂದರು. ಹೆಸ್ಕಾಂ ಮತ್ತು ಜೆಸ್ಕಾಂನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಕಾಮಗಾರಿಯನ್ನು ಕೈಗೊಳ್ಳುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಅದರ ಸಾಧಕ ಬಾಧಕಗಳನ್ನು ಪರಿಗಣಿಸಿ, ಉಳಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.