ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿಯಲ್ಲೇ ಮನೆ ನಿರ್ಮಿಸಿಕೊಂಡು ‘ಇ-ಸ್ವತ್ತು’ ಅಥವಾ ಖಾತಾ ದಾಖಲೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಲಕ್ಷಾಂತರ ಜನರಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೃಷಿ ಭೂಮಿಯಲ್ಲಿರುವ ಮನೆಗಳಿಗೂ ಈಗ ಅಧಿಕೃತ ಇ-ಸ್ವತ್ತು ದಾಖಲೆ ನೀಡಲು ಸರ್ಕಾರ ಹಸಿರು ನಿಶಾನೆ ತೋರಿದೆ.
ಹೊಸ ನಿಯಮಗಳ ಪ್ರಕಾರ, 2025ರ ಏಪ್ರಿಲ್ 7ರೊಳಗೆ ನಿರ್ಮಿಸಲಾದ ಮನೆಗಳಿಗೆ ‘ನಮೂನೆ 11ಬಿ’ ಮೂಲಕ ದಾಖಲೆ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ನಂತರ ನಿರ್ಮಿಸಲಾದ ಮನೆಗಳಿಗೆ ಭೂ ಪರಿವರ್ತನೆ ಹಾಗೂ ಪ್ಲಾನ್ ಅನುಮೋದನೆ ಕಡ್ಡಾಯವಾಗಲಿದೆ.
ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಭಾಗದಲ್ಲಿ ಮನೆಗಳ ಮಾಲೀಕತ್ವದ ಗೊಂದಲ ಕಡಿಮೆಯಾಗುವ ಜೊತೆಗೆ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೂ ಸಹಾಯವಾಗಲಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಿ ಇ-ಸ್ವತ್ತು ದಾಖಲೆ ಪಡೆಯಬಹುದಾಗಿದೆ.
ಇ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ಆಸ್ತಿ ಮಾಲೀಕತ್ವಕ್ಕೆ ಕಾನೂನು ಮಾನ್ಯತೆ ಸಿಗುವುದರ ಜೊತೆಗೆ ಬ್ಯಾಂಕ್ ಸಾಲ, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಹಕಾರಿಯಾಗಲಿದೆ.








