ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್ ಸೆಟ್ ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ರೈತರ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳಲು 2ರಿಂದ 3 ಲಕ್ಷ ಲಂಚ ಕೊಡಬೇಕಿದೆ ಎಂದು ದೂರಿದರು. ಇದಕ್ಕೆ ಆಕ್ಷೇಪಿಸಿದ ಜಾರ್ಜ್ 500 ಮೀ.ಗಿಂತ ಒಳಗಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸಂಪರ್ಕ ಕೊಡಲಾಗುತ್ತಿದೆ. 500 ಮೀ. ಗಿಂತ ಹೆಚ್ಚು ಅಂತರವಿರುವ ಕೃಷಿ ಪಂಪ್‌ಸೆಟ್ ಗಳಿಗೆ ವಿಶೇಷ ಯೋಜನೆ ನೀಡಲಾಗುತ್ತಿದೆ ಎಂದರು.
“ರೈತರಿಗೆ ನಿರಂತರ 7 ಗಂಟೆ ಸೇರಿದಂತೆ ರಾಜ್ಯದ ಜನರಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿದೆ.ವಿಜಯಪುರ ಜಿಲ್ಲೆಯಲ್ಲಿ 353 ಕೃಷಿ ಮಾರ್ಗಗಳಿಗೆ ಹಗಲು ವೇಳೆ 7 ಗಂಟೆ 3 ಫೇಸ್, 165 ಮಾರ್ಗಗಳಲ್ಲಿ ಹಗಲು 4 ಗಂಟೆ ರಾತ್ರಿ 3 ಮೂರು ಗಂಟೆಗಳ ಕಾಲ , 42 ಕೃಷಿ ಮಾರ್ಗದಲ್ಲಿ ಹಗಲು 3 ಮತ್ತು ರಾತ್ರಿ 4 ಗಂಟೆಗಳ ಕಾಲ ತ್ರೀ ಫೇಸ್ ಹಾಗೂ 43 ಕೃಷಿ ಮಾರ್ಗಗಳಲ್ಲಿ ಹಗಲು 3 ಗಂಟೆ ರಾತ್ರಿ 3 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ”, ಎಂದು ಸಚಿವರು ಮಾಹಿತಿ ನೀಡಿದರು.