ಬೆಂಗಳೂರು : ಭೂಮಂಜೂರಿ ಪ್ರಕರಣಗಳ ದರಖಾಸ್ತು ಪೋಡಿ ದುರಸ್ತಿ ಸಂಬಂಧ ನಮೂನೆ-1 ರಿಂದ 5 ಮತ್ತು ನಮೂನೆ-6 ರಿಂದ 10 ಪ್ರಕ್ರಿಯೆ ಸರಳೀಕರಣ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ಮೇಲೆ ಓದಲಾದ ಕ್ರಮ ಸಂಖ್ಯೆ: (1) ರಲ್ಲಿನ ಆಯವ್ಯಯ ಭಾಷಣದ ಕಂಡಿಕೆ 395 ರಲ್ಲಿ “ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಸರ್ಕಾರಿ ಜಮೀನುಗಳಿಗೆ ಸರ್ಕಾರದಿಂದ ಸ್ವಯಂ ಪ್ರೇರಿತವಾಗಿ ನಮೂನೆ-1 ರಿಂದ 5 ರವರೆಗಿನ ದಾಖಲೆಗಳನ್ನು ಸಿದ್ಧಪಡಿಸಲಾಗುವುದು’ ಎಂದು ಘೋಷಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (27) ರ ಘನ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಪೋಡಿ ದುರಸ್ತಿ ವಿಚಾರವಾಗಿ ನಮೂನೆ 1-5 ಮತ್ತು 6-10 ಕ್ಕೆ ಸಂಬಂಧಪಟ್ಟಂತೆ ಘನ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 21276/2021 ದಿನಾಂಕ 10-01-2022 ರ ಆದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಗೊಳಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ಈ ರೀತಿಯ ಪ್ರಕರಣಗಳು ಪುನರಾವರ್ತಿಸದಂತೆ ಹಾಗೂ ನ್ಯಾಯಾಲಯದ ಆದೇಶಗಳನ್ನು ಕೂಡಲೇ ಅನುಷ್ಠಾನಗೊಳಿಸುವ ಕುರಿತು ಸೂಕ್ತ ಕ್ರಮ ವಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಇವರಿಗೆ ಸೂಚಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (29) ರ ಸರ್ಕಾರದ ಆದೇಶದಲ್ಲಿ ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ರಾಜ್ಯದ ಮಂಜೂರಿ ಜಮೀನುಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಶೀಘ್ರವಾಗಿ ಲಭ್ಯವಾಗುವ ನಿಟ್ಟಿನಲ್ಲಿ ಭೌತಿಕವಾಗಿ ದಾಖಲಿಸಲಾಗಿರುವ ನಮೂನೆ-01 ರಿಂದ 05 ರವರೆಗಿನ ನಮೂನೆಗಳನ್ನು ಡಿಜಿಟೈಜ್ ಮಾಡಲು ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.
ಕಂದಾಯ ಇಲಾಖೆಯಿಂದ ದರಖಾಸ್ತು ಪೋಡಿ ಅಳತೆಗಾಗಿ ಭೂಮಾಪನ ಇಲಾಖೆಗೆ ಕಳುಹಿಸುವ ಕಡತಗಳ ಬಾಬು ಈ ಕೆಳಗೆ ನಮೂದಿಸಿರುವ ಕಾಯ್ದೆ ಮತ್ತು ನಿಯಮಗಳನ್ವಯ ನಡವಳಿಗಳನ್ನು ಜರುಗಿಸಲಾಗುತ್ತದೆ.
ಕರ್ನಾಟಕ ಭೂಮಂಜೂರಾತಿ ನಿಯಮಾವಳಿ 1969 ರ ನಿಯಮ 13
ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 109
ಕರ್ನಾಟಕ ರೆವಿನ್ಯೂ ಸರ್ವೆ ಮ್ಯಾನ್ಯುಯಲ್ ರ ಅಧ್ಯಾಯ 13 (1977 ರಿಂದ ಜಾರಿಗೆ ಬಂದಿದೆ).
ಕರ್ನಾಟಕ ಭೂಕಂದಾಯ ನಿಯಮಗಳು 1966, ರ ನಿಯಮ 72
ಕರ್ನಾಟಕ ಭೂಕಂದಾಯ ನಿಯಮಗಳು 1966, ರ ನಿಯಮ 108 ( ಹೆಚ್ )
ಕರ್ನಾಟಕ ಭೂಕಂದಾಯ ನಿಯಮ. (ಅಕ್ರಮ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವ ಬಗ್ಗೆ) 1970 ರ ನಿಯಮ 11
ಇವುಗಳ ಅನ್ವಯ ಅಳತೆ ಮಾಡಿ, ಪೋಡಿ ದಾಖಲೆಗಳಾದ ಟಿಪ್ಪಣಿ, ಪಕ್ಕಾ, ಪುಸ್ತಕ, ಇತ್ಯಾದಿಗಳನ್ನು ತಯಾರಿಸಿ, ಕೆ.ಜೆ.ಪಿ. ಮಾಡಿ ಆಕಾರಬಂದು ದುರಸ್ತಿ ಪಡಿಸಲಾಗುತ್ತಿದೆ.
2005 ನೇ ಇಸವಿಯವರೆಗೂ ದರಖಾಸ್ತು ಪೋಡಿ ಕೆಲಸವನ್ನು ನಿರ್ವಹಿಸುವಾಗ ಮೂಲ ದರಖಾಸ್ತು ಕಡತವನ್ನು ತಹಶೀಲ್ದಾರ್ ಕಚೇರಿಯಿಂದ ಭೂಮಾಪನ ಇಲಾಖೆಗೆ ಕಳುಹಿಸಿದ ಮೇರೆಗೆ, ಭೂಮಂಜೂರಿ ಆದೇಶ (OM), ಸಾಗುವಳಿ ಚೀಟಿ, ಅನುಮೋದಿತ ರೆವಿನ್ಯೂ ನಕ್ಷೆ. ಪೋಡಿ ಶುಲ್ಕ, ಸಂದಾಯವಾಗಿರುವ ದೃಢೀಕರಣ ಪತ್ರ / ವಿನಾಯ್ತಿ ಪತ್ರ, ಮ್ಯುಟೇಷನ್ ಮತ್ತು ಪಹಣಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಸರಿ ಇದ್ದ ಪಕ್ಷದಲ್ಲಿ ಅಡವಿ ಭೂಮಾಪಕರಿಂದ ಅಳತೆ ಕೆಲಸ ನಿರ್ವಹಿಸಲ್ಪಟ್ಟು ತಪಾಸಕರಿಂದ ತಪಾಸಣೆ ಮಾಡಿ, ಭೂದಾಖಲೆಗಳ ಸಹಾಯಕ ನಿರ್ದೇಶಕರವರಿಂದ ದೃಡೀಕರಿಸಿ, ನಂತರ ಭೂ.ಉ.ನಿ ರವರಿಂದ ಮೇಲು ಸಹಿಯಾಗಿ ಆಕಾರಬಂದು ದುರಸ್ತಿಪಡಿಸಲಾಗುತ್ತಿತ್ತು. ಒಂದು ವೇಳೆ ಪ್ರಕರಣಗಳಲ್ಲಿ ಅಳತೆ ಸಮಯದಲ್ಲಿ ಮಂಜೂರಿ ದಾಖಲೆಗಳಿಗೆ ವ್ಯತಿರಿಕ್ತವಾಗಿ ಸ್ಥಳ ಬದಲಾವಣೆ, ವಿಸ್ತೀರ್ಣ ಬದಲಾವಣೆ ಇತ್ಯಾದಿ ವ್ಯತ್ಯಾಸಗಳು ಕಂಡು ಬಂದಲ್ಲಿ ಕಡತವನ್ನು ತಹಶೀಲ್ಕಾರ್ ರವರಿಗೆ ಹಿಂದಿರುಗಿಸಿ, ಸೂಕ್ತ ಕಂದಾಯ ಕ್ರಮದೊಂದಿಗೆ ಅವರಿಂದ ದೃಢೀಕರಣವಾದ ನಂತರ ಪರಿಷ್ಕೃತ ಆದೇಶಗಳಿಗನುಗುಣವಾಗಿ ಪೋಡಿ ಕೆಲಸ ಪೂರ್ಣಗೊಳಿಸಲಾಗುತ್ತಿತ್ತು.
ಮೇಲೆ ಓದಲಾದ ಕ್ರ.ಸಂ.(05)ರ ಸರ್ಕಾರದ ಆದೇಶದಂತೆ ಭೂಮಾಪನ ಇಲಾಖೆಯನ್ನು ಕಂದಾಯ ಇಲಾಖೆಯೊಂದಿಗೆ ಕಾರ್ಯ ವಿಲೀನ ಮಾಡಿ ದರಖಾಸ್ತು ಮತ್ತು ಇತರ ಪೋಡಿ ಕಡತಗಳಿಗೆ ಮೇಲು ಸಹಿ ಮಾಡುವ ಅಧಿಕಾರವನ್ನು ತಹಶೀಲ್ದಾರ್ ರವರಿಗೆ ಪ್ರತ್ಯಾಯೋಜಿಸಲಾಯಿತು.
ಮೇಲೆ ಓದಲಾದ ಕ್ರ.ಸಂ.(06)ರ ಸರ್ಕಾರದ ಸುತ್ತೋಲೆಯಲ್ಲಿ ಈ ಹಿಂದೆ ಮಾಲೂರು ತಾಲ್ಲೂಕಿನಲ್ಲಿ ಎಲ್ಲಾ ದರಖಾಸ್ತು ಕಡತಗಳ ಅಳತೆ ಮತ್ತು ದುರಸ್ತಿ ಕಾರ್ಯಕ್ರಮ ಜರುಗಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನದಿಂದ ರೈತರಿಗೆ ಅನುಕೂಲ ಆಗಿರುವುದನ್ನು ಗಮನಿಸಿ, ಈ ಅಂದೋಲನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲು ನಿರ್ಧರಿಸಿ ಸೂಚನೆಗಳನ್ನು ನೀಡಲಾಗಿತ್ತು.
ಮುಂದುವರೆದು, ಮೇಲೆ ಓದಲಾದ ಕ್ರ.ಸಂ.(07) ರ ಭೂಮಾಪನ ಇಲಾಖಾ ಆಯುಕ್ತರು ಸುತ್ತೋಲೆ ಹೊರಡಿಸಿ, ಒಂದು ಸರ್ಕಾರಿ ಸರ್ವೆ ನಂಬರಿನಲ್ಲಿರುವ ಮಂಜೂರಿದಾರರಿಗೆ ದರಖಾಸ್ತು ಪೋಡಿ ಮಾಡುವ ಸಂದರ್ಭದಲ್ಲಿ ಆ ಸರ್ವೆ ನಂಬರಿನ ಎಲ್ಲಾ ಮಂಜೂರಿದಾರರ ಜಮೀನಿನ ಬಾಬು ಏಕಕಾಲದಲ್ಲಿ ಅಳತೆ ಮಾಡಿ, ಪೋಡಿ ಮಾಡುವ ಉದ್ದೇಶದಿಂದ. ಇದಕ್ಕೆ ಪೂರಕವಾದ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಸಿದ್ಧಪಡಿಸಿಕೊಳ್ಳವ ನಿಟ್ಟಿನಲ್ಲಿ ನಮೂನೆ 01, ನಮೂನೆ 02. ನಮೂನೆ 03. ನಮೂನೆ 04, ಮತ್ತು ನಮೂನೆ 05, ಎಂಬ 05 ನಮೂನೆಗಳನ್ನು ನಿಗಧಿಪಡಿಸಲಾಯಿತು. ಈ 05 ನಮೂನೆಗಳು ಈ ಕೆಳಗಿನ ಪಟ್ಟಿಯಲ್ಲಿ ಕಾಣಿಸಿರುವ ವಿಷಯಗಳ ಬಾಬು ಮಾಹಿತಿಯನ್ನು ಅಳತೆ ಪೂರ್ವದಲ್ಲಿ ಕ್ರೋಢೀಕರಿಸಿಕೊಳ್ಳುವ ಉದ್ದೇಶವನ್ನು ಹೊಂದಿರುತ್ತದೆ. ಈ ರೀತಿಯಾಗಿ 05 ನಮೂನೆಗಳನ್ನು ಮಂಜೂರಿ ದಾಖಲೆಗಳ ಆಧಾರದಲ್ಲಿ ಭರ್ತಿ ಮಾಡಿಕೊಂಡ ನಂತರ, ಯಾವುದೇ ಒಂದು ಸರ್ವೆ ನಂಬರ್ ನಲ್ಲಿ ಮಂಜೂರಾಗಿರುವ ಎಲ್ಲಾ ಮಂಜೂರಿದಾರರ ಜಮೀನಿನ ಬಾಬು, ಪೋಡಿ ಮಾಡಲು ಸೂಚನೆಗಳನ್ನು ನೀಡಲಾಗಿತ್ತು.