ಕೊಪ್ಪಳ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅದಾದ ಬಳಿಕ ಕೇವಲ ಐದು ದಿನಗಳಲ್ಲಿ ಮತ್ತೆ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿತ್ತು.
ಇಂದು ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಮುನಿರಾಬಾದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ ಎಂದು ಘೋಷಿಸಿದರು. ಈ ಮೂಲಕ ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವುದಾಗಿ ಸ್ಪಷ್ಟಪಡಿಸಿದರು.
ಗೇಟ್ ದುರಸ್ತಿ ಕೆಲಸವನ್ನು ಬಹಳ ಜಾಗೃತೆಯಿಂದ ಮಾಡಲಾಗಿತ್ತು. ಎಲ್ಲರ ಶ್ರಮದಿಂದ 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿದಿದೆ. ಮಳೆರಾಯನಿಗೆ ಸರ್ಕಾರದ ಪರವಾಗಿ ಧನ್ಯವಾದ ಹೇಳುತ್ತೇನೆ.ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳ ಇತಿಹಾಸವಿದೆ. 50 ವರ್ಷಕ್ಕೆ ಗೇಟ್ ಬದಲಾವಣೆ ಮಾಡಬೇಕೆಂಬ ನಿಯಮವಿದೆ. ತಜ್ಞರ ಕಮಿಟಿ ಮಾಡಲಾಗಿದೆ ಈಗಾಗಲೇ ಈ ಕುರಿತು ವರದಿ ನೀಡಿದ್ದಾರೆ. ವರದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಿಂದಿನ ಐದು ವರ್ಷದಲ್ಲಿ ರಸ್ತೆಗಳು ಆಗಿಲ್ಲ. ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಅನೇಕ ಕಡೆ ರಸ್ತೆ ಹಾಳಾಗಿವೆ. ರಾಜ್ಯಪಾಲರು ಅರ್ಕಾವತಿ ಪತ್ರ ಬರೆದಿದ್ದರೆ ಅದನ್ನು ನೋಡುತ್ತೇವೆ. ಅವರ ಕಚೇರಿಯಿಮಂದಲೇ ಸೋರಿಕೆಯಾಗಿದೆ. ಅದರ ಬಗ್ಗೆ ತನಿಖೆಯಾಗಲಿ ಎಂದರು.