ಬೆಂಗಳೂರು : ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಮಾರ್ಚ್ ತಿಂಗಳ 2 ಸಾವಿರ ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ಹಲವು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2 ಸಾವಿರ ರೂ. ಪಾವತಿಯಾಗಿತ್ತು. ಏಪ್ರಿಲ್ 24 ರಂದು ಪುನಃ 2 ಸಾವಿರ ರೂ. ವರ್ಗಾವಣೆ ಆಗಿದ್ದರಿಂದ 10 ದಿವಸ ಮೊದಲೇ ಮೇ ತಿಂಗಳ ಹಣ ಪಾವತಿಯಾಗಿದೆ. ಚುನಾವಣೆಯಲ್ಲಿ ಮಹಿಳೆಯರ ಮತ ಸೆಳೆಯಲು ಹೀಗೆ ಮಾಡಲಾಗಿದೆ ಎಂಬ ಸಂದೇಶಗಳು ಹರಿದಾಡಿದ್ದವು. ಆದರೆ ಇಲಾಖೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಇನ್ನೂ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರು ಕೂಡ ಆಧಾರ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ–ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ–ಕೆವೈಸಿ ಅಪ್ಡೇಟ್ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎನ್ನಲಾಗಿದೆ.