ಬಳ್ಳಾರಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ ತಿಂಗಳ ಹಣ ಬಿಡುಗಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿಗೆ ಹಂಚಲು ಹಣ ಇಲ್ಲ ಎಂಬ ದೇವೇಗೌಡರ ಹೇಳಿಕೆ ಶುದ್ಧ ಸುಳ್ಳು. ಅಕ್ಟೋಬರ್ ವರೆಗೂ ಒಂದು ತಿಂಗಳದ್ದೂ ತಪ್ಪದೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ ಅಂದರೆ ಏನು ಅರ್ಥ? ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿಯನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇದು ನಮ್ಮ ಸ್ಪಷ್ಟ ತೀರ್ಮಾನ. ನೋಟಿಸ್ ಗಳನ್ನು ಹಿಂಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ, ಚುನಾವಣೆ ಪ್ರಣಾಳಿಕೆಯಲ್ಲಿ ಅವರೇ ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡುವುದಾಗಿ ಹೇಳಿ, ಈಗ ರಾಜಕೀಯಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ಅವಧಿಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿಕುನ್ಹಾ ಅವರ ನೇತೃತ್ವದ ಆಯೋಗ ರಚಿಸಲಾಗಿದೆ. ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಇದೆಲ್ಲ ಸುಳ್ಳು ಎಂದರೆ ವಾಸ್ತವಾಂಶ ಬದಲಾಗಲ್ಲ. ಈ ಬಗ್ಗೆ ನ್ಯಾಯಾಲಯವಿದೆ, ಅಲ್ಲಿ ಸತ್ಯಾಸತ್ಯತೆ ಬಯಲಾಗಲಿದೆ.
ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹರು. ಯಡಿಯೂರಪ್ಪ ಅವರು ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆಗಲೂ ಸಾಕಷ್ಟು ಅಂಶಗಳನ್ನು ದಾಖಲೆ ಸಹಿತ ಮಾತನಾಡಿದ್ದೆ. ಈಗ ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.