ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿದ ಅರ್ಹ ಫಲಾನುಭವಿಗಳಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿ ನೀಡಿದ್ದು, ಕಾರ್ಡ್ ರದ್ದಾಗಿದ್ದರೆ 24 ಗಂಟೆಯಲ್ಲಿ ವಾಪಸ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅನರ್ಹರ ಕಾರ್ಡ್ ಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಲಾಗುವುದು.ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದೆ. ಇದುವರೆಗೆ 3.63 ಲಕ್ಷ ಕಾರ್ಡ್ ರದ್ದಾಗಿದೆ ಎಂದು ಹೇಳಿದ್ದಾರೆ.
ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹರ ಯಾವ ಕಾರ್ಡ್‌ಗಳೂ ರದ್ದಾಗುವುದಿಲ್ಲ, ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಮಾನದಂಡಗಳಿದ್ದು, ಅದನ್ನು ಆಧರಿಸಿ ಕಾರ್ಡ್ ಗಳ ಪರಿಶೀಲನೆ ನಡೆಯಲಿದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಕೈತಪ್ಪುವುದಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ 6.5 ಕೋಟಿ ಜನರ ಪೈಕಿ 4.5 ಕೋಟಿ ಬಿಪಿಎಲ್ ಫಲಾನುಭವಿಗಳಿದ್ದಾರೆ. ಅರ್ಹರಲ್ಲದವರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಿಕೊಡುತ್ತೇವೆ. ಕೇಂದ್ರದ ನಿಯಮ ಉಲ್ಲಂಘಿಸಿ ಪಡೆದ ಕಾರ್ಡ್ ಗಳು ರದ್ದಾಗಲಿವೆ ಎಂದು ತಿಳಿಸಿದ್ದಾರೆ.