ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಕಾರ್ಯಕ್ರಮದಡಿ ಆಯ್ಕೆಗೊಂಡ ಅಡುಗೆ ಸಿಬ್ಬಂದಿ, ಅಡುಗೆ ಕೆಲಸ ನಿರ್ವಹಿಸುತ್ತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದೇ 60 ವರ್ಷಗಳ ವಯೋಮಿತಿಯನ್ನು ಪೂರೈಸಿದ ದಿನಾಂಕ 31-03-2022ರಂದು ಅಥವಾ ನಂತ್ರ ಅಡುಗೆ ಕೆಲಸದಿಂದ ಬಿಡುಗಡೆ ಹೊಂದಿರುವ ಅಥವಾ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗಳಿಗೆ ಅಂತಿಮವಾಗಿ ಒಂದು ಬಾರಿಗೆ ಇಡಿಗಂಟು ಸೌಲಭ್ಯವನ್ನು ಒದಗಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆವಿ ತ್ರಿಲೋಕ ಚಂದ್ರ ಅವರು ಸುತ್ತೋಲೆ ಹೊರಡಿಸಿದ್ದು, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆ) ಕಾರ್ಯಕ್ರಮದಡಿ ಆಯ್ಕೆಗೊಂಡು ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ:31.03.2022 ರಂದು 60 ವರ್ಷಗಳ ವಯೋಮಿತಿಯನ್ನು ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಮತ್ತು ಈ ದಿನಾಂಕದ ನಂತರದ ಅವಧಿಯಲ್ಲಿ 60 ವರ್ಷ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರವು ಮಂಜೂರು ಮಾಡಿ ಆದೇಶವನ್ನು ಉಲ್ಲೇಖದ ರೀತ್ಯಾ ನೀಡಿರುತ್ತದೆ. ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನೀಡಿರುವ ಷರತ್ತುಗಳನ್ನು ಮತ್ತು ಕೆಳಕಂಡ ಸೂಚನೆಗಳನ್ನು ಅನ್ವಯಿಸಿಕೊಂಡು ಅಡುಗೆ ಸಿಬ್ಬಂದಿಗೆ ಅವರು ಸಲ್ಲಿಸಿರುವ ತಾತ್ಕಾಲಿಕ ಸೇವೆಯ ಅವಧಿಯ ಹಿನ್ನೆಲೆಯಲ್ಲಿ, ಒಂದು ಬಾರಿಗೆ ಇಡಿಗಂಟು ಸೌಲಭ್ಯವನ್ನು ನೀಡಲು . ಸರ್ಕಾರವು ನಿಗಧಿಪಡಿಸಿ ಆದೇಶಿಸಿರುವ ಮೊತ್ತವನ್ನು ಮಂಜೂರು ಮಾಡುವಂತೆ ಸೂಚಿಸಿದೆ.
ಅಡುಗೆ ಸಿಬ್ಬಂದಿಯು ಸಲ್ಲಿಸಿದ ಸೇವೆಯನ್ನು ಆಧರಿಸಿ ಒಂದು ಬಾರಿಗೆ ನೀಡಲು ಸರ್ಕಾರ ನಿಗಧಿಪಡಿಸಿ ಆದೇಶಿಸಿರುವ ಅಂತಿಮ ಇಡಿಗಂಟಿನ
ಅಡುಗೆ ಸಿಬ್ಬಂದಿಯವರು ಸಲ್ಲಿಸಿರುವ ಸೇವೆಯ ಒಟ್ಟು ಅವಧಿ
5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದಲ್ಲಿ ರೂ. 30,000/-(ರೂಪಾಯಿ. ಮೂವತ್ತು ಸಾವಿರ ಮಾತ್ರ).
15 ವರ್ಷ ಹಾಗೂ ಅದಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ ರೂ.40,000/- (ರೂಪಾಯಿ, ನಲವತ್ತು ಸಾವಿರ ಮಾತ್ರ).
ಅರ್ಹ ಅಡುಗೆ ಸಿಬ್ಬಂದಿಗಳಿಗೆ ಇಡಿಗಂಟಿನ ಮೊತ್ತವನ್ನು ಮಂಜೂರು ಮಾಡಲು ಸಲ್ಲಿಸಬೇಕಾದ ಮತ್ತು ಪರಿಶೀಲಿಸಬೇಕಾದ ದಾಖಲೆಗಳು ಮತ್ತು ಈ ಸಂಬಂಧ ಸರ್ಕಾರವು ವಿಧಿಸಿರುವ ಷರತ್ತುಗಳು:-
1. ಅರ್ಹ ಅಡುಗೆ ಸಿಬ್ಬಂದಿಗೆ ಇಡಿಗಂಟು ನೀಡುವ ಸಂದರ್ಭದಲ್ಲಿ ಉಲ್ಲೇಖದ ಸರ್ಕಾರಿ ಆದೇಶದಲ್ಲಿನ ಹಾಗೂ ಈ ಸುತ್ತೋಲೆಯಲ್ಲಿ ನಮೂದಿಸಿರುವ ಎಲ್ಲಾ ಷರತ್ತುಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
2. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಅಡುಗೆ ಸಿಬ್ಬಂದಿ ಅಥವಾ ಅರ್ಹ ಕಾನೂನುಬದ್ದ ಅವಲಂಬಿತರು ಇಡಿಗಂಟಿಗೆ ಬೇಡಿಕೆ ಪ್ರಸ್ತಾವನೆಯನ್ನು ಸೇವೆ ಸಲ್ಲಿಸಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸುವುದು.
3. ಸಂಬಂಧಿಸಿದ ಶಾಲೆಗಳ ಮುಖ್ಯಶಿಕ್ಷಕರು ಶಾಲೆಯಲ್ಲಿರುವ ಅಡುಗೆ ಸಿಬ್ಬಂದಿಯ ಸೇವಾವಧಿಯ ಹಾಜರಾತಿ ದಾಖಲೆಗಳನ್ನು ಆಧರಿಸಿ, ಪರಿಶೀಲಿಸಿ, ಪ್ರಸ್ತಾವನ ಕ್ರಮಬದ್ಧವಾಗಿದ್ದಲ್ಲಿ, ಮಾಹಿತಿಗಳನ್ನು ದೃಢೀಕರಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪರಿಶೀಲನೆಗಾಗಿ ಹಾಗೂ ಇಡಿಗಂಟು ಮಂಜೂರಾತಿಯ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದು.
4. ಬೇಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಯವರು ಪಿಎಂ ಪೋಷಣ್ ಯೋಜನೆಯ ತಾಲ್ಲೂಕು ಸಹಾಯಕ ನಿರ್ದೇಶಕರವರಿಂದ ಸ್ಪಷ್ಟವಾದ ಅಭಿಪ್ರಾಯ ಮತ್ತು ಸಂಬಂಧಿಸಿದ ಅಗತ್ಯ ದಾಖಲೆಗಳ ದೃಢೀಕರಣವನ್ನು ಪಡೆದು ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇಡಿಗಂಟು ಬೇಡಿಕೆಯ ಪರಿಶೀಲನೆಗಾಗಿ ಹಾಗೂ ಹಣ ಮಂಜೂರಾತಿಯ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸುವುದು.
5. ಜಿಲ್ಲಾ ಪಂಚಾಯತ್ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಈ ಕೆಳಕಂಡಂತೆ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ರಚಿಸಲ್ಪಟ್ಟಿರುವ ತ್ರಿಸದಸ್ಯ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸುವುದು, ಸಲ್ಲಿಸಿರುವ ದಾಖಲೆಗಳ ನೈಜತೆ ಬಗ್ಗೆ ಮತ್ತು ಪರಿಶೀಲನೆಯ ನಂತರ ಅರ್ಹ ಪ್ರಸ್ತಾವನೆಗಳಿಗೆ ಇಡಿಗಂಟು ನೀಡುವ ಸಂಬಂಧ ಫಲಾನುಭವಿಗೆ ನಿಗಧಿಪಡಿಸಿದ ಅರ್ಹ ಇಡಿಗಂಟಿನ ಮೊತ್ತಕ್ಕೆ ಮಂಜೂರಾತಿಯ ಆದೇಶವನ್ನು ನೀಡುವಂತೆ ತ್ರಿಸದಸ್ಯ ಸಮಿತಿಯು ತನ್ನ ಅಭಿಪ್ರಾಯವನ್ನು ನಡವಳಿಯೊಂದಿಗೆ ಸಲ್ಲಿಸಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೊದನೆ ಪಡೆದು ಜಿಲ್ಲಾ ಪಂಚಾಯತಿಯಿಂದ ಇಡಿಗಂಟು ಮಂಜೂರಾತಿ ಆದೇಶವನ್ನು ಹೊರಡಿಸತಕ್ಕದ್ದು.
6. ಇಡಿಗಂಟು ಪ್ರಸ್ತಾವನೆಗಳನ್ನು ಜಿಲ್ಲಾ ಹಂತದಲ್ಲಿ ಸ್ವೀಕೃತಗೊಂಡ ನಂತರ ತ್ರಿಸದಸ್ಯ ಸಮಿತಿಯು ಪರಿಶೀಲಿಸತಕ್ಕದ್ದು, ಇದಕ್ಕಾಗಿ ಸದರಿ ಸಮತಿಯು ಈ ಕೆಳಕಂಡ ಅಧಿಕಾರಿಗಳನ್ನು ಒಳಗೊಂಡು
6.1 ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು,
6.2 ಆಯಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ.
6.3 ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್‌ನ ಪಿಎಂ ಪೋಷಣ್ ಯೋಜನೆಯ ಶಿಕ್ಷಣಾಧಿಕಾರಿಗಳು.
7. ಸಂಬಂಧಿಸಿದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಂಜೂರಾತಿ ಆದೇಶವನ್ನು ಆಧರಿಸಿ, ಅಡುಗೆ ಸಿಬ್ಬಂದಿಗಳಿಗೆ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರ ಬ್ಯಾಂಕ್ ಖಾತೆಗೆ ನೇರವಾಗಿ ಮಂಜೂರಾದ ನಿಗಧಿತ ಇಡಿಗಂಟಿನ ಮೊತ್ತವನ್ನು ತಾಲ್ಲೂಕು ಪಂಚಾಯತ್ ಹಂತದಲ್ಲಿ ಖಜಾನೆ ಮೂಲಕ ಬಿಡುಗಡೆಗೊಳಿಸುವುದು.
8. ಅರ್ಹ ಅಡುಗೆ ಸಿಬ್ಬಂದಿಗೆ ಪಾವತಿಸುವ ಇಡಿಗಂಟೆಗೆ ಸಂಬಂಧಿಸಿದ ವೆಚ್ಚಗಳನ್ನು ರಾಜ್ಯ ಕ್ಷೀರಭಾಗ್ಯ ಯೋಜನೆ (ಎಂ.ಡಿ.ಎಂ) ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ 2202-00-101-018 (2202-01-196-1-02) ರ ಉಪ ಶೀರ್ಷಿಕೆ 090 ರಡಿ ಆಯವ್ಯಯದಲ್ಲಿ ನಿಗದಿಯಾಗಿರುವ ಅನುದಾನದಿಂದ ತಾಲ್ಲೂಕು ಪಂಚಾಯತ್‌ನಿಂದ ಭರಿಸತಕ್ಕದ್ದು, ಈ ವೆಚ್ಚ ಭರಿಸಲು ಈಗಾಗಲೇ ಬಿಡುಗಡೆ ಆಗಿರುವ ಮತ್ತು ಮುಂದಿನ ಪ್ರತಿ ತ್ರೈಮಾಸಿಕದಲ್ಲಿ ಬಿಡುಗಡೆ ಆಗುವ ರಾಜ್ಯ ಸರ್ಕಾರದ ಅನುದಾನದಲ್ಲಿಯೇ ಇಡಿಗಂಟಿನ ವೆಚ್ಚವನ್ನು ಭರಿಸಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಸೂಕ್ತ ಲೆಕ್ಕ ವಿವರವನ್ನು ಇಡುವುದು.
9. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಅಡುಗೆ ಸಿಬ್ಬಂದಿಯವರು ಮರಣ ಹೊಂದಿದ್ದರೆ, ಅಂತಹ ಅಡುಗೆ ಸಿಬ್ಬಂದಿಯ ಕಾನೂನುಬದ್ಧ ಅರ್ಹ ಅವಲಂಬಿತರಿಗೆ ಇಡಿಗಂಟು ಮೊತ್ತವನ್ನು ಪಾವತಿಸಲು ಅವರ ಅರ್ಹ ಕುಟುಂಬ ಸದಸ್ಯರಿಂದ ದೃಢೀಕರಿಸಿದ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆ, ಸಂಬಂಧಿಸಿದ ಶಾಲೆಯ ಮುಖ್ಯಶಿಕ್ಷಕರಿಂದ ಸೇವಾ ದೃಢೀಕರಣ ಪತ್ರ, ಅಡುಗೆ ಸಿಬ್ಬಂದಿಯ ಮರಣ ಸಮರ್ಥನಾ ಪ್ರಮಾಣ ಪತ್ರ, ಅವಲಂಬಿತರ ವಂಶವೃಕ್ಷ ಪ್ರಮಾಣ ಪತ್ರ. ಅವಲಂಬಿತರ ಆಧಾರ್ ಕಾರ್ಡ್, ಅವಲಂಬಿತರ ಬ್ಯಾಂಕ್ ಉಳಿತಾಯ ಖಾತೆಯ ಪುಸ್ತಕದ ಮುಖಪುಟ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ನಮೂನಗಳನ್ನು ಈ ಸುತ್ತೋಲೆಯೊಂದಿಗೆ (ಅನುಬಂಧ-1, 2 ಮತ್ತು 3 ರಲ್ಲಿ) ಅಡಕವಿರಿಸಿದೆ.
10. ಅರ್ಹ ಅಡುಗೆ ಸಿಬ್ಬಂದಿ/ ಅವರ ಕಾನೂನು ಬದ್ದ ಅವಲಂಬಿತರು ಮೇಲ್ಕಂಡ ನಮೂನೆಗಳಲ್ಲಿ ಮಾಹಿತಿಯನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಂದ ದೃಢೀಕರಣ ಪಡೆದು ಪೂರ್ಣ ದಾಖಲೆ ಮತ್ತು ಮಾಹಿತಿಯೊಂದಿಗೆ ಶಾಲೆಗೆ ಸಲ್ಲಿಸಿ ಇಡಿಗಂಟು ಬೇಡಿಕೆ ಪ್ರಸ್ತಾವನೆಯನ್ನು ಅಡುಗೆ ಕೆಲಸ ನಿರ್ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಿಗೆ ನೇರವಾಗಿ ಸಲ್ಲಿಸುವುದು.
11. ಪ್ರತಿ ವರ್ಷ ಸಲ್ಲಿಸುವ ಮುಂದಿನ ವರ್ಷದ ಮುಂಗಡ ಆಯವ್ಯಯದ ಬೇಡಿಕೆಯಲ್ಲಿ ಆಯಾ ವರ್ಷದಲ್ಲಿ 60 ವರ್ಷ ವಯೋಮಾನ ಪೂರೈಸುವ ಅರ್ಹ ಅಡುಗೆ ಸಿಬ್ಬಂದಿಗಳಿಗೆ (ಮರಣ ಹೊಂದಿದವರನ್ನು ಸೇರಿಸಿಕೊಂಡು) ಇಡಿಗಂಟು ಪಾವತಿಸಲು ಅಗತ್ಯವಿರಬಹುದಾದ ಅಂದಾಜು ಅನುದಾನ ಬೇಡಿಕೆಯನ್ನು ತಾಲ್ಲೂಕು ಹಂತದಿಂದ ಲೆಕ್ಕಿಸಿ, ಜಿಲ್ಲಾ ಹಂತದಲ್ಲಿ ತಾಲ್ಲೂಕುವಾರು ಕ್ರೂಢೀಕರಣ ಮಾಡಿ, ರಾಜ್ಯ ಕಛೇರಿಗೆ ಎಲ್ಲಾ ಜಿಲ್ಲೆಗಳಿಂದ ಅಗತ್ಯ ಮಾಹಿತಿಯನ್ನು ಪ್ರತಿ ವರ್ಷ 20ನೇ ಆಗಸ್ಟ್ ಮಾಹೆಯೊಳಗೆ ಸಲ್ಲಿಸತಕ್ಕದ್ದು.
ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ