ಬೆಂಗಳೂರು: ರಾಜ್ಯದ ಬಡವರ್ಗದವರಿಗೆ ಉಚಿತ ಚಿಕಿತ್ಸಾ ಸೌಲಭ್ಯಕ್ಕಾಗಿ ಯಶಸ್ವಿನಿಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ಈಗಾಗಲೇ ಹಲವು ರೋಗಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ಮುಂದುವರೆದು ರಾಜ್ಯದ ಕ್ಯಾನ್ಸರ್ ಪೀಡಿತರಿಗೆ ಗುಡ್ ನ್ಯೂಸ್ ಎನ್ನುವಂತೆ ಯಶಸ್ವಿನಿ ಯೋಜನೆಯಡಿ ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲು ಸೇರ್ಪಡೆ ಮಾಡಿದೆ.
ಕ್ಯಾನ್ಸರ್ ಬಂದಿದೆ ಅಂದ್ರೆ ಸಾವೇ ಮುಂದಿನ ದಾರಿ ಅನ್ನೋ ಮಾತಿದೆ. ಈ ರೋಗಕ್ಕೆ ಚಿಕಿತ್ಸೆ ಪಡೆಯುವುದಂತೂ ಬಡ ವರ್ಗದ ಜನರಿಗೆ ಕನಸಿನ, ಆರ್ಥಿಕ ಹೊರೆಯ ಮಾತೇ ಸರಿ. ಆದ್ರೇ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿ ಕ್ಯಾನ್ಸರ್ ರೋಗಿಗಳಿಗೆ ನೀಡುವಂತ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲು, ಈ ಯೋಜನೆಗೆ ಸೇರ್ಪಡೆ ಮಾಡಿದೆ.
ಈಗಾಗಲೇ ರಾಜ್ಯದಲ್ಲಿ 474 ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಯಶಸ್ವಿನಿ ನೆಟ್ವರ್ಕ್ ಅಡಿಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಡವರ ಆರ್ಥಿಕ ಹೊರೆ ನೀಗಿಸೋ ನಿಟ್ಟಿನಲ್ಲಿ ಈಗ ಕ್ಯಾನ್ಸರ್ ರೋಗದ ಚಿಕಿತ್ಸೆಯಾಗಿರುವಂತ ಕಿಮೋಥೆರಪಿಯನ್ನು ಯಶಸ್ವಿನಿ ಯೋಜನೆಯಡಿ ಉಚಿತವಾಗಿ ನೀಡೋದಕ್ಕೆ ಸರ್ಕಾರ ಕ್ರಮವಹಿಸಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಆಗದ ಬಡ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಉಚಿತ ಕಿಮೋಥೆರಪಿ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು. ಇದರ ಜೊತೆಗೆ ಸರ್ಜಿಕಲ್ ಆಂಕೊಲಾಜಿ ಹಾಗೂ ರೇಡಿಯೊ ಥೆರಪಿ ವಿಭಾಗದಿಂದ 261 ಚಿಕಿತ್ಸೆಗಳನ್ನು ಅಳವಡಿಸಿಕೊಂಡು ದುಬಾರಿ ವೆಚ್ಚದ ಕ್ಯಾನ್ಸರ್ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ಇನ್ನೂ ಯಶಸ್ವಿನಿ ಯೋಜನೆ ಅಡಿ ಒಂದೇ ವರ್ಷದಲ್ಲಿ 1,796 ಮಂದಿ 5.20 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜನವರಿ 2023ರಿಂದ ಜನವರಿ 2024ರ ಅವಧಿಯಲ್ಲಿ ಕಿಮೋ ಥೆರಪಿ ವಿಭಾಗದಲ್ಲಿ ಒಟ್ಟು ₹1.43 ಕೋಟಿ ವೆಚ್ಚದಲ್ಲಿ 1,097 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ರೇಡಿಯೊ ಥೆರಪಿ ವಿಭಾಗದಲ್ಲಿ ₹1.87 ಕೋಟಿ ವೆಚ್ಚದಲ್ಲಿ 228 ಮಂದಿಗೆ ಹಾಗೂ ಸರ್ಜಿಕಲ್ ಅಂಕೊಲಾಜಿ ವಿಭಾಗದಲ್ಲಿ ₹1.90 ಕೋಟಿ ವೆಚ್ಚದಲ್ಲಿ 411 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಂದಹಾಗೇ ‘ಯಶಸ್ವಿನಿ’ ಯೋಜನೆಯಡಿ ಗರಿಷ್ಠ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ಕ್ಯಾನ್ಸರ್ ಪೀಡಿತ ವ್ಯಕ್ತಿಯು ನೆಟ್ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು.
‘SSLC ಪರೀಕ್ಷೆ-2’ಗೆ ನೋಂದಾಯಿಸಿರುವ ವಿದ್ಯಾರ್ಥಿಗಳೇ ಗಮನಿಸಿ : ಜೂ.05 ರವರೆಗೆ ‘ವಿಶೇಷ ತರಗತಿ’ ಆಯೋಜನೆ
BIG NEWS: ಮುಂದಿನ ವರ್ಷದಿಂದ ‘SSLC ಗ್ರೇಸ್ ಮಾರ್ಕ್ಸ್’ ರದ್ದತಿಗೆ ‘ಸಿಎಂ ಸಿದ್ಧರಾಮಯ್ಯ’ ಆದೇಶ