ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಮ್ಆರ್‌ಸಿಎಲ್ ಇದೀಗ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದ್ದು, ಬರುವ ಆಗಸ್ಟ್ ತಿಂಗಳಲ್ಲಿ ಆರ್ ವಿ ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಯಲ್ಲೊ ಮಾರ್ಗದ ಮೆಟ್ರೋ ಸೇವೆ ಆರಂಭವಾಗಲಿದೆ.
ಹೌದು ನಿನ್ನೆ ತಾನೇ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (CMRS) ತಪಾಸಣೆ ಆರಂಭಿಸಿದೆ. ಆಗಸ್ಟ್‌ನಲ್ಲಿ ಸಂಚಾರ ಆರಂಭಿಸುವುದು ಬಹುತೇಕ ನಿಶ್ಚಿತವಾಗಿದೆ. ಇಂದು ಕೂಡ ತಪಾಸಣೆ ನಡೆಯಲಿದೆ.
ನಮ್ಮ ಮೆಟ್ರೋದಲ್ಲಿ ಚಾಲಕ ರಹಿತ ರೈಲಿನ ಸಿಬಿಟಿಸಿ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಬಳಕೆ ಆಗುತ್ತಿರುವುದರಿಂದ ಸೂಕ್ಷ್ಮ ತಪಾಸಣೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಮಂಗಳವಾರ ಮೋಟರ್ ಟ್ರಾಲಿ ಇನ್‌ಸ್ಪೆಕ್ಷನ್ ಕೈಗೊಂಡಿರುವ ಅಧಿಕಾರಿಗಳು ಟ್ರ್ಯಾಕ್ ಪರಿಶೀಲನೆ ಮಾಡಿದರು. ರೈಲಿನ ವೇಗ, ತಿರುವುಗಳಲ್ಲಿ ಸಂಚಾರ, ನಿಲ್ದಾಣಗಳಲ್ಲಿ ನಿಲ್ಲುವ ರೀತಿ, ಸಿಗ್ನಲಿಂಗ್ ಸಿಸ್ಟಂ ಬಗ್ಗೆ ತಪಾಸಣೆ ನಡೆಯಲಿದೆ.
ಆರ್‌ವಿ ರಸ್ತೆ – ಬೊಮ್ಮಸಂದ್ರ ನಡುವಿನ 18.8 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಬರಲಿವೆ. ಈ ಮಾರ್ಗ ದಕ್ಷಿಣ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವ್ಯಾಪಿಸಿದೆ. ಜತೆಗೆ ಆರ್.ವಿ.ರಸ್ತೆ ಬಳಿ ಹಸಿರು ಮಾರ್ಗದ ಜತೆ ಸಂಪರ್ಕ ಹೊಂದಿರುವುದರಿಂದ ಈ ಮಾರ್ಗವು ದಕ್ಷಿಣ ಬೆಂಗಳೂರು ಜನರನ್ನು ನಗರ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ