ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 108- ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ನೆರಡು ದಿನಗಳಲ್ಲಿ ವೇತನ ಬಿಡುಗಡೆ ಮಾಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
108- ಆ್ಯಂಬುಲೆನ್ಸ್ ಸಿಬ್ಬಂದಿಗಳ ವೇತನ ಹಾಗೂ ನಿರ್ವಹಣೆಗಾಗಿ 2024-25ನೇ ಸಾಲಿನ 3ನೇ ತ್ರೈಮಾಸಿಕ ಕಂತು 162 ಕೋಟಿ ರು. ಅನ್ನು 2 ದಿನದಲ್ಲಿ ಬಿಡುಗಡೆ ಮಾಡಲಾಗುವುದು. ಜಿವಿಕೆ-ಇಎಂಆರ್‌ಐ 2008ರಲ್ಲಿ 10 ವರ್ಷಗಳ ಅವಧಿಗೆ ಟೆಂಡರ್ ಪಡೆದಿತ್ತು. ಈ ಅವಧಿ 2018ಕ್ಕೆ ಮುಗಿದಿದ್ದು, ಹೊಸ ಟೆಂಡರ್‌ವರೆಗೆ 715 ಆ್ಯಂಬುಲೆನ್ಸ್ ಸಮ ರ್ಪಕವಾಗಿ ನಿರ್ವಹಣೆ ಮಾಡಿದರೆ 40.62 ಕೋಟಿ ರು.ಗಳಂತೆ ಅನುದಾನ ನೀಡುವುದಾಗಿ ತಿಳಿಸಲಾಗಿತ್ತು. ಕಾಲಕಾಲಕ್ಕೆ ಆರೋಗ್ಯ ಇಲಾಖೆ ಹಣ ಪಾವತಿ ಮಾಡುತ್ತಿದ್ದು, 108 ಸಿಬ್ಬಂದಿಗೆ ವೇತನ ವಿಳಂಬಕ್ಕೂ ಇಲಾಖೆಗೆ ಸಂಬಂಧವಿಲ್ಲ ಎಂದಿದೆ.
ಇನ್ನು ಅಕ್ಟೋಬರ್‌ನ ವೇತನವನ್ನು ನವೆಂಬರ್ ನಲ್ಲಿ ನೀಡಬೇಕಾಗಿದ್ದು, ಅಕ್ಟೋಬರ್, ನವೆಂಬರ್, ಡಿಸೆಂಬರ್‌ಗೆ ಅನ್ವಯವಾಗುವಂತೆ 2 ದಿನಗಳಲ್ಲಿ 162 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.