ಬೆಳಗಾವಿ : ಅರ್ಹ ಬಿಪಿಎಲ್ ಕಾರ್ಡ್ಗಳ ರದ್ದು ಮಾಡಿರುವ ವಿಚಾರವಾಗಿ ವಿಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿತ್ತು. ತಕ್ಷಣ ಅರ್ಹರ ಬೀಪಲ್ ಕಾರ್ಡ್ ರದ್ದು ಮಾಡದೇ, ಅನರ್ಹರು ಹೊಂದಿದ್ದ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿಷ್ಕರಣೆ ಮಾಡಿತು. ಈ ವಿಚಾರವಾಗಿ ವಿಧಾನಸಭೆಯಲ್ಲಿ ಸರ್ಕಾರ ಯಾವುದೇ ಅರ್ಹ ಬಿಪಿಎಲ್ ಕುಟುಂಬದವರ ಪಡಿತರ ಚೀಟಿ ರದ್ದು ಪಡಿಸಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಇದರ ಅನ್ವಯ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳ ನೌಕರರು ಬಿಪಿಎಲ್ ಕಾರ್ಡ ಪಡೆಯುವಂತಿಲ್ಲ. ಇದರೊಂದಿಗೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು ಸಹ ಬಿಪಿಎಲ್ ನಡಿ ಬರುವುದಿಲ್ಲ ಎಂದರು.
ಪೋಷಕರ ಆದಾಯ ಹೆಚ್ಚಿದ್ದರೂ, ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ವಾಸವಿದ್ದು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಿದ್ದಲ್ಲಿ ಪಡಿತರ ಚೀಟಿ ನೀಡಲು ಕ್ರಮವಹಿಸಲಾಗುವುದು. ಅರ್ಹ ಕುಟುಂಬ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ರಾಜ್ಯದಲ್ಲಿ 03 ಲಕ್ಷ ಕಾರ್ಡ್ಗಳನ್ನು ಪುನರ್ ಸ್ಥಾಪಿಸುವ ಕಾರ್ಯ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೇ ಆದಾಯ ತೆರಿಗೆ ಪಾವತಿಸುವ 98,473 ಪಡಿತರ ಚೀಟಿಗಳು ಹಾಗೂ 4036 ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಯಾವುದೇ ಅರ್ಹ ಬಿಪಿಎಲ್ ಕಾಡ್ದಾರರಿಗೆ ತೊಂದರೆಯಾಗದಂತೆ ಈಗಾಗಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಹಶೀಲ್ದಾರ್ ನೀಡುವ ಆದಾಯ ಪ್ರಮಾಣ ಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಪಡೆದು ಸ್ಥಳ ಪರಿಶೀಲನೆ ಮಾಡಿ, ಹೊಸ ಬಿಪಿಎಲ್ ಕಾರ್ಡು ವಿತರಿಸಲು ಕ್ರಮ ವಹಿಸಲಾಗವುದು ಎಂದು ಹೇಳಿದರು.