ಬೆಂಗಳೂರು : ಇಂದು ರಾಜ್ಯದಾದ್ಯಂತ ಹಾಲು ಮೊಸರು ಸಿಗೋದು ಅನುಮಾನ ಎಂದೇ ಹೇಳಲಾಗುತ್ತಿತ್ತು. ಏಕೆಂದರೇ ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಹಾಗೂ ನೌಕರರು ಸಮರ ಸಾರಿದ್ದು, ಫೆಬ್ರವರಿ 1ರಿಂದ ಅಂದರೆ ಇಂದಿನಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದರು. ಆದರೆ ಇದೀಗ ಮುಷ್ಕರವನ್ನು ಫೆಬ್ರವರಿ 7ಕ್ಕೆ ಮುಂದೂಡಿದ್ದು, ಇಂದು ಹಾಲಿನ ಉತ್ಪನ್ನಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.
ಈ ಕುರಿತು ನಿನ್ನೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧಿಕಾರಿ, ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಕೆಎಂಎಫ್ ಅಧ್ಯಕ್ಷರು ಮತ್ತು ಸಹಕಾರ ಇಲಾಖೆ ಫೆ.7ರೊಳಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.1ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಒಂದು ವೇಳೆ ಫೆಬ್ರವರಿ ಮೊದಲ ವಾರದೊಳಗೆ ಬೇಡಿಕೆ ಈಡೇರಿ ಇ ಸದಿದ್ದರೆ ಸಂಘದ ಕಾರ್ಯಕಾರಿ ಮಂಡಳಿ ಸಭೆ ಕರೆದು ಮುಂದಿನ ಹೋರಾಟ ತೀರ್ಮಾನಿಸಲಾಗು 0 ವುದು ಎಂದು ತಿಳಿಸಿದರು.
ಬೇಡಿಕೆ ಏನು?
7ನೇ ವೇತನ ಆಯೋಗ ವರದಿಯಂತೆ ವೇತನ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಆದ್ರೆ ನೌಕರರು ಮನವಿಗೆ ಕೆಎಂಎಫ್ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎನ್ನಲಾಗಿದೆ. ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನ 2024 ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶಿಸಬೇಕು ಎಂಬುವುದು ನೌಕರರ ಆಗ್ರಹವಾಗಿದೆ. ತಾಂತ್ರಿಕ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ ಎಂದು ತಿಳಿದು ಬಂದಿದೆ.
ಹೀಗಾಗಿ ಇಂದಿನಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದರು. ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆಯಲ್ಲಿದ್ದಾರೆ . ಕಳೆದ ಎರಡ್ಮೂರು ತಿಂಗಳಿನಿಂದ ಮನವಿ ಸಲ್ಲಿಸಿದರೂ ಆಡಳಿತ ಮಂಡಳಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಬ್ಬಂದಿಗಳಿಗೆ ಸಿಕ್ಕದ ಹಿನ್ನೆಲೆ ಆಕ್ರೋಶಗೊಂಡಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ, ನೌಕರರಿಗೆ ಈಗಾಗಲೇ ಏಳನೇ ವೇತನ ಆಯೋಗದ ವರದಿ ಶಿಫಾರಸಿನಂತೆ ಪೂರ್ಣ ಪ್ರಮಾಣದಲ್ಲಿ ಪರಿಷ್ಕೃತ ವೇತನ ಜಾರಿ ಮಾಡಲಾಗಿದೆ. ಕೆಎಂಎಫ್ ಅಧಿಕಾರಿ, ನೌಕರರಿಗೆ ಕೇವಲ ಶೇ.17ರಷ್ಟು ಮಾತ್ರ ವೇತನ ಹೆಚ್ಚಳ ಮಾಡಲಾಗಿದ್ದು, ಇನ್ನೂ ಶೇ.8ರಷ್ಟು ವೇತನ ಹೆಚ್ಚಳ ಬಾಕಿ ಉಳಿದಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ವೇತನ ಹೆಚ್ಚಿಸುವಂತೆ ಒತ್ತಾಯಿಸಿದರೂ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸಂಘ ಆರೋಪಿಸಿದೆ.