ಬೆಂಗಳೂರು : ಅರಣ್ಯ ಹಕ್ಕು ಕಾಯ್ದೆ ಅಡಿ ಬುಡಕಟ್ಟು ಸಮುದಾಯದ ಅರಣ್ಯವಾಸಿಗಳುಸಲ್ಲಿಸಿರುವ ಎಲ್ಲರೀತಿಯ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಬುಡಕಟ್ಟು ಸಮುದಾಯದ ಅರಣ್ಯವಾಸಿಗಳಿಂದ ವೈಯಕ್ತಿಕ ಹಕ್ಕುಪತ್ರಕ್ಕಾಗಿ 12,222 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 4,856 ಹಕ್ಕುಪತ್ರಗಳನ್ನು ವಿತರಿಸಿ. 6,363 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಉಳಿದಂತೆ 558 ಅರ್ಜಿಗಳು ವಿಲೇವಾರಿ ಮಾಡಬೇಕಿದೆ. ಪಾರಂಪರಿಕ ಅರಣ್ಯವಾಸಿಗಳಿಂದ ಹಕ್ಕುಪತ್ರಕ್ಕಾಗಿ 1,626 ಅರ್ಜಿ ಸ್ವೀಕರಿಸಿ, 531 ಹಕ್ಕುಪತ್ರ ವಿತರಿಸಲಾಗಿದೆ.
104 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಉಳಿದ 1,095 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಮುದಾಯದಹಕ್ಕುಪತ್ರಕ್ಕಾಗಿ 260 ಅರ್ಜಿ ಸಲ್ಲಿಕೆಯಾಗಿದ್ದು, 160 ಹಕ್ಕುಪತ್ರ ವಿತರಿಸಿ 38,117 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲ ರೀತಿಯ ಹಕ್ಕುಪತ್ರಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ನಿರ್ದೇಶಿಸಿದರು.