ಬೆಂಗಳೂರು : ಈ ಬಾರಿ ಗಣೇಶ ಹಬ್ಬ ಅದ್ದೂರಿಯಾಗಿ ಆಚರಿಸಲು ಬಿಬಿಎಂಪಿ ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಪಿಒಪಿ ಗಣೇಶನ ಮೂರ್ತಿ ಗಳಿಗೆ ನಿರ್ಬಂಧ ಹೇರಲಾಗಿದೆ.
ಹೌದು ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಇಂದು ಬಿಬಿಎಂಪಿ ಸಭೆ ನಡೆಸಿದ್ದು, ಬೆಂಗಳೂರು ಜಿಲ್ಲಾಧಿಕಾರಿ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆ, ವಾಯು ಮಾಲಿನ್ಯ ಮಂಡಳಿ ಹಿರಿಯ ಅಧಿಕಾರಿಗಳು ಚರ್ಚಿಸಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ಹೇರಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ‘ಗಣೇಶನ ಪ್ರತಿಷ್ಠಾಪನೆ ಮಾಡುವವರಿಗೆ ಯಾವುದೇ ನಿರ್ಬಂಧವಿಲ್ಲ. 24 ಗಂಟೆಯೊಳಗೆ ಅನುಮತಿ ಕೊಡಲು ಆಯಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಇನ್ನು ಈಗಾಗಲೇ ಪಿಒಪಿ ಗಣೇಶಗಳನ್ನ ಸೀಜ್ ಮಾಡಲಾಗಿದೆ. ಕಳೆದ ಬಾರಿ 5 ಅಡಿ ಗಣೇಶ ಮೂರ್ತಿಗಷ್ಟೇ ಅನುಮತಿ ಕೊಡಲಾಗಿತ್ತು. ಈ ಬಾರಿ ಬೆಂಗಳೂರಲ್ಲಿ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಗಣೇಶನ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಗಣೇಶ ವಿಸರ್ಜನೆ ಮಾಡುವ 42 ಕೆರೆ, ಕಲ್ಯಾಣಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು. ಕಲ್ಯಾಣಿ ಬಳಿ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ ನಿಲುಗಡೆಗೆ ಸೂಚಿಸಿದ್ದು, ಬೆಂಗಳೂರು ನಗರದ ಮನೆ ಮನೆ ಗಣಪನ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.