ಬೆಂಗಳೂರು : ರಾಜ್ಯ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಕೆನೆಭರತಿ ಹಾಲಿನ ಪುಡಿ ಬದಲಿಗೆ ಟೆಟ್ರಾ ಪ್ಯಾಕ್ ನಲ್ಲಿನ ಹಾಲು ವಿತರಿಸಲು ಕೆಎಂಎಫ್ ನಿರ್ಧರಿಸಿದೆ.
ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ನಲ್ಲಿನ ಹಾಲು ವಿತರಿಸಲು ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು, ಶೀಘ್ರದಲ್ಲೇ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ಹಾಲು ವಿತರಿಸುವ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಡಿರುವ ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಬಜೆಟ್ ನಲ್ಲಿ ಟೆಟ್ರಾ ಪ್ಯಾಕ್ ಹಾಲು ವಿತರಿಸುವ ಯೋಜನೆಗೆ ಹಸಿರು ನಿಶಾನೆ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲಿನ ಪೌಡರ್ ವಿತರಿಸುವಲ್ಲಿ ಸಾಲು ಸಾಲು ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ಹಾಲು ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.