ವಾಷಿಂಗ್ಟನ್: ಅಮೆರಿಕದ ಮಾಜಿ ಎಫ್ಬಿಐ (FBI) ನಿರ್ದೇಶಕ ಮತ್ತು ಡೊನಾಲ್ಡ್ ಟ್ರಂಪ್ ವಿರುದ್ಧದ ‘ರಷ್ಯಾ ಕನೆಕ್ಷನ್’ ತನಿಖೆಯ ನೇತೃತ್ವ ವಹಿಸಿದ್ದ ರಾಬರ್ಟ್ ಮುಲ್ಲರ್ (81) ಶನಿವಾರ ನಿಧನರಾಗಿದ್ದಾರೆ. ಆದರೆ, ಅವರ ನಿಧನಕ್ಕೆ ಸಂತಾಪ ಸೂಚಿಸುವ ಬದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅವರು ಸತ್ತಿದ್ದು ನನಗೆ ಸಂತೋಷ ತಂದಿದೆ” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮುಲ್ಲರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, “ರಾಬರ್ಟ್ ಮುಲ್ಲರ್ ಈಗಷ್ಟೇ ಮೃತಪಟ್ಟಿದ್ದಾರೆ. ಒಳ್ಳೆಯದಾಯಿತು, ಅವರು ಸತ್ತಿದ್ದಕ್ಕೆ ನನಗೆ ಸಂತೋಷವಿದೆ. ಇನ್ನು ಮುಂದೆ ಅವರು ಮುಗ್ಧ ಜನರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ!” ಎಂದು ವಾಗ್ದಾಳಿ ನಡೆಸಿದ್ದಾರೆ.
ಹಳೆಯ ಹಗೆತನ: 2016ರ ಅಮೆರಿಕ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ಮುಲ್ಲರ್ ಅವರು ಎರಡು ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಸಿದ್ದರು. ಈ ತನಿಖೆಯನ್ನು ಟ್ರಂಪ್ ಮೊದಲಿನಿಂದಲೂ “ಮಾಟಗಾತಿಯರ ಬೇಟೆ” (Witch Hunt) ಎಂದು ಕರೆಯುತ್ತಾ ಮುಲ್ಲರ್ ವಿರುದ್ಧ ಹಗೆತನ ಸಾಧಿಸಿದ್ದರು.
ರಾಬರ್ಟ್ ಮುಲ್ಲರ್ ಅವರು ಅಮೆರಿಕದ ಇತಿಹಾಸದಲ್ಲಿ ಸುದೀರ್ಘ ಕಾಲ ಎಫ್ಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರು (2001-2013). ಇವರು ಸೆಪ್ಟೆಂಬರ್ 11ರ ಭಯೋತ್ಪಾದನಾ ದಾಳಿಯ ನಂತರ ಎಫ್ಬಿಐ ಅನ್ನು ಮರುಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಬ್ಬ ಸಾರ್ವಜನಿಕ ಸೇವಕ ಹಾಗೂ ವಿಯೆಟ್ನಾಂ ಯುದ್ಧದ ವೀರನ ನಿಧನದ ಬಗ್ಗೆ ಅಧ್ಯಕ್ಷರೊಬ್ಬರು ಇಷ್ಟು ಕೀಳುಮಟ್ಟದ ಹೇಳಿಕೆ ನೀಡಿರುವುದು ಅಮಾನವೀಯ ಎಂದು ಡೆಮೋಕ್ರಾಟ್ ಪಕ್ಷದ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








