ಬೆಳಗಾವಿ : ರೇಣುಕಾ ಎಲ್ಲಮ್ಮ ದೇವಸ್ಥಾನಕ್ಕೆ ಕೆಳವರ್ಗದ ಜನರೇ ಜಾಸ್ತಿ ಬರುತ್ತಾರೆ. ದೇಶ ವಿದೇಶಗಳಿಂದಲೂ ಸಹ ಭಕ್ತಾದಿಗಳು ದೇವಸ್ಥಾನಕ್ಕೆ ಬರುತ್ತಾರೆ. ಯಲ್ಲಮ್ಮ ತಾಯಿ ಬಹಳ ಶಕ್ತಿ ದೇವತೆ ಅಂತ ಭಕ್ತರು ನಂಬಿದ್ದಾರೆ.ಆದರೆ ದೇವರು ಕೂಡ ಕೆಟ್ಟದ್ದು ಮಾಡಲಿ ಎಂದು ಬಯಸುವುದಿಲ್ಲ. ದೇವರು ಹಾಗೂ ಧರ್ಮ ಮನುಷ್ಯ ಮನುಷ್ಯನನ್ನ ಪ್ರೀತಿಸಿ ಎನ್ನುತ್ತವೆ ಎಂದು ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದೇವೆ. ಇದುವರೆಗೂ ರಾಜ್ಯದಲ್ಲಿ ಪ್ರಯಾಣದ ಟಿಕೆಟ್ ವೆಚ್ಚ 300 ಕೋಟಿ ಆಗಿದೆ. ಅಷ್ಟು ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ.ಈ ರೀತಿ ಯಾವ ಸರ್ಕಾರಗಳು ಕೂಡ ಮಾಡಿರಲಿಲ್ಲ.ಬಿಜೆಪಿಯವರು ಧರ್ಮ ಆಚಾರ ವಿಚಾರ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಮಾತಾಡುತ್ತಾರೆ. ಇಂತಹ ಕೆಲಸ ಅವರು ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಸೌದತ್ತಿ ಕ್ಷೇತ್ರಕ್ಕೆ ಒಂದೂವರೆ ಕೋಟಿ ಭಕ್ತರು ಬಂದು ಹೋಗುತ್ತಾರೆ.ಪ್ರವಾಸೋದ್ಯಮ ಮಂಡಳಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರಕ್ಕೆ ಸುಮಾರು ಎರಡು ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವನೀರು, ಶೌಚಾಲಯ, ಪಾರ್ಕಿಂಗ್, ತಂಗುದಾಣದ ವ್ಯವಸ್ಥೆಯನ್ನು ಪೂರೈಸಬೇಕಾಗಿದೆ.
ಬಡವರು ಹಾಗೂ ರೈತಾಪಿ ವರ್ಗದವರು ಹೆಚ್ಚು ಭೇಟಿ ನೀಡುವ ಈ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1087ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು. ಮನುಷ್ಯರಿಗೆ ದಾಸೋಹ ವ್ಯವಸ್ಥೆಯಿರುವಂತೆ ರಾಸುಗಳಿಗೂ ಮೇವು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.