ಉತ್ತರ ಗೋವಾದ ನ್ಯಾಯಾಲಯವು ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್ ಕ್ಲಬ್ನ ಸಹ ಮಾಲೀಕರಾದ ಗೌರವ್ ಮತ್ತು ಸೌರಭ್ ಲೂತ್ರಾ ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
25 ಜನರನ್ನು ಬಲಿ ತೆಗೆದುಕೊಂಡ ಡಿಸೆಂಬರ್ 6, 2025 ರ ಅಗ್ನಿ ದುರಂತದ ಘಟನೆಗೆ ಸಂಬಂಧಿಸಿದಂತೆ ಥೈಲ್ಯಾಂಡ್ನಿಂದ ಗಡೀಪಾರು ಮಾಡಿದ ನಂತರ ದೆಹಲಿಯಿಂದ ಗೋವಾಕ್ಕೆ ಕರೆತರಲಾದ ಸಹೋದರರನ್ನು ಉತ್ತರ ಗೋವಾದ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆಗೆ ಒಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ಮಾಪುಸಾ ಪೂಜಾ ಸರ್ದೇಸಾಯಿ ಅವರು ಇಬ್ಬರು ಸಹೋದರರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಗೋವಾ ಪೊಲೀಸರ ತಂಡ ಲೂತ್ರಾ ಸಹೋದರರೊಂದಿಗೆ ಬೆಳಿಗ್ಗೆ 10.45 ಕ್ಕೆ ಉತ್ತರ ಗೋವಾದ ಮೋಪಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
ಇವರಿಬ್ಬರನ್ನು ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಸಿಯೋಲಿಮ್ ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಅವರನ್ನು ಮಾಪುಸಾದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಗ್ಯದ ಮೌಲ್ಯಮಾಪನದ ಬಳಿಕ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆರೋಪಿಗಳನ್ನು ಹೊಸ ವೈದ್ಯಕೀಯ ಪರೀಕ್ಷೆಗೆ ಕಳುಹಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅದರಂತೆ ಇಬ್ಬರನ್ನು ಮತ್ತೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ ಅವರನ್ನು ನ್ಯಾಯಾಧೀಶ ಸರ್ದೇಸಾಯಿ ಅವರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಆದೇಶಿಸಲಾಗಿದೆ.








