ಹಾವೇರಿ: ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿಯ ಬಗ್ಗೆ ಸುಳ್ಳು ವರದಿ ಕೊಟ್ಟರೆ, ರೈತರಿಗೆ ಅನ್ಯಾಯಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ಹಾಗೂ ಬೆಳೆಹಾನಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾನವೀಯತೆ, ಹೃದಯವಿಶಾಲತೆಯಿಂದ ನಿಖರವಾಗಿ ಬೆಳೆಹಾನಿ ಸಮೀಕ್ಷೆಕೈಗೊಳ್ಳಬೇಕು. ರೈತರ ಹೊಲಗಳಿಗೆ ತೆರಳಿ ಹಾನಿಯನ್ನು ಪರಿಶೀಲಿಸಬೇಕು. ಸಮೀಕ್ಷೆ ಕುರಿತಂತೆ ರೈತರಿಂದ ಯಾವುದೇ ದೂರುಗಳು ಬರಬಾರದು. ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳ್ಳುವವರೆಗೂ ಯಾವೊಬ್ಬ ಕೃಷಿ ಅಧಿಕಾರಿಗಳು ರಜೆ ಮೇಲೆ ತೆರಳಬಾರದು, ಕೇಂದ್ರ ಸ್ಥಾನ ಬಿಡಬಾರದು. ರೈತರ ಸಂಪರ್ಕಕ್ಕೆ ಸಿಗಬೇಕು. ರೈತರ ಸಂಕಷ್ಟದಲ್ಲಿ ಸಂದರ್ಭದಲ್ಲಿ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬೆಳಹಾನಿ ಸಮೀಕ್ಷೆ ಕೇವಲ ಕೃಷಿ ಇಲಾಖೆ ಕೆಲಸಮಾತ್ರವೆಂದು ಪರಿಗಣಿಸಬೇಡಿ. ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ರೈತರ ಪರಿಸ್ಥಿತಿ ಗಂಭೀರವಾಗಿದೆ, ರೈತರು ಸಂದಿಗ್ದ ಸ್ಥಿತಿಯಲ್ಲಿದ್ದಾರೆ. ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿಖರವಾದ ಸಮೀಕ್ಷೆ ಕೈಗೊಳ್ಳಿ. ಕಷ್ಟದ ಪರಿಸ್ಥಿತಿಯಲ್ಲಿರುವ ರೈತರ ನೆರವಿಗೆ ನಿಲ್ಲಿ ಎಂದು ಸೂಚನೆ ನೀಡಿದರು.
ಕೆರೆ ಕೋಡಿಯಿಂದ ನೀರು ನುಗ್ಗಿ ಹಾನಿಯಾದ ಬೆಳೆಗಳಿಗೂ ವಿಮಾ ಸೌಕರ್ಯ ಕಲ್ಪಿಸಬೇಕು. ವಿಮಾ ಕಂಪನಿಗಳು ಸೂಚಿಸಿದಂತೆ ಕೃಷಿ ಅಧಿಕಾರಿಗಳು ವರದಿ ನೀಡಬಾರದು. ಸ್ಥಳ ಪರಿಶೀಲನೆ ನಡೆಸಿ ವಿಮಾ ಸೌಕರ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಬೆಳೆ ಕಟಾವು ಸಮೀಕ್ಷೆಯನ್ನು ನಿಖರವಾಗಿಕೈಗೊಳ್ಳಬೇಕು. ಎಲ್ಲಿ ಬೆಳೆ ನಷ್ಟವಾಗಿದೆ ಅಲ್ಲಿ ಸರ್ವೇಮಾಡಿ. ಕೇವಲ ವಿಮಾ ಕಂಪನಿಗಳು ಶಿಫಾರಸ್ ಮಾಡಿದ ಪತ್ರಕ್ಕೆ ಸಹಿಹಾಕಬೇಡಿ. ಕೃಷಿ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಬೇಕು. ಇಲ್ಲವಾದರೆ ರೈತರಿಗೆ ವಿಷ ಕೊಟ್ಟಹಾಗೆ ಆಗುತ್ತದೆ. ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಬಹುಪಾಲು ಗ್ರಾಮಗಳಿಗೆ ಮಳೆಯಿಂದ ಕುಡಿಯುವ ನೀರಿನ ಪೈಪ್ಗಳು ಹಾಳಾಗಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಕುಡಿಯುವ ನೀರು ಪೂರೈಕೆ ಪಂಪ್ಗಳು ಹಾಳಾಗಿವೆ. ಈ ಕುರಿತಂತೆ ತ್ವರಿತ ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮುಂಗಾರಿಗೆ ಹಳೆಯ ದಾಸ್ತಾನು ಸೇರಿ 1,16,827 ಮೆಟ್ರಿಕ್ ಟನ್ ಜಿಲ್ಲೆಗೆ ಪೂರೈಕೆಯಾಗಿದೆ. 1,08,495 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ. 9,732 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಯೂರಿಯಾ ಗೊಬ್ಬರದ ಬದಲು ನ್ಯಾನೋ ಗೊಬ್ಬರ ಬಳಸಬೇಕು. ಈ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃತಕ ಅಭಾವ ಸೃಷ್ಟಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಕೃಷಿ ಜಾಗೃತ ದಳದಿಂದ ಕಳಪೆ ಬೀಜ-ಗೊಬ್ಬರ, ಕೃತಕ ಅಭಾವ ಸೃಷ್ಟಿಸಿದವರ ಮೇಲೆ 144 ಪ್ರಕರಣಗಳು ದಾಖಲಾಗಿವೆ. 15 ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ಹಾಕಲಾಗಿದೆ. ರೂ.28 ಕೋಟಿ ಮೊತ್ತದ ಕಳಪೆ ಬೀಜ ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 450 ಮಿ.ಮೀ ವಾಡಿಕೆ ಮಳೆ ಎದುರು 632 ಮಿ.ಮಿ. ಮಳೆಯಾಗಿದೆ. ಶೇ.40ರಷ್ಟು ಹೆಚ್ಚಿನ ಮಳೆಯಾಗಿದೆ. 3.8 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದ್ದು, ಅತಿವೃಷ್ಟಿಯಿಂದ ಜುಲೈನಿಂದ ಆಗಸ್ಟ್ 5ರವರೆಗೆ ಅಂದಾಜು 27,353 ಹೆಕ್ಟೇರ್, ಆಗಸ್ಟ್ 8ರವರೆಗೆ 40,027 ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಸಮೀಕ್ಷೆ ನನಗೆ ತೃಪ್ತಿತಂದಿಲ್ಲ. ಹಾನಗಲ್ನಂತಹ ಮಲೇನಾಡು ಪ್ರದೇಶದಲ್ಲಿ ಕೇವಲ ಎರಡು ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 1,99,167 ರೈತರಿಗೆ ರೂ.502 ಕೋಟಿ ಪರಿಹಾರ ಹಣ ನೀಡಲಾಗಿದೆ. 2021ನೇ ಸಾಲಿನಲ್ಲಿ 58,072 ರೈತರಿಗೆ ರೂ.68 ಕೋಟಿ ವಿಮಾ ಹಣ ಬಂದಿದೆ. ರೈತ ವಿದ್ಯಾನಿಧಿ ಯೋಜನೆಯಡಿ 22 ಸಾವಿರ ವಿದ್ಯಾರ್ಥಿಗಳು ರೂ.3ಕೋಟಿ, 44 ಸಾವಿರ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಮಳೆಯಿಂದ ಬೆಳೆಹಾನಿ ಮಾಹಿತಿಯನ್ನು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಖಾರಿ ಮಹಮ್ಮದ್ ರೋಷನ್ ಉಪಸ್ಥಿತರಿದ್ದರು.