ಹೈದರಾಬಾದ್ : ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಸಾಕ್ಷಿಯಾಗಲು ಸಹಸ್ರಾರು ಜನರು ಕಾಯುತ್ತಿದ್ದಾರೆ. ಇದರ ನಡುವೆ ಹರಕೆಯೊತ್ತ ಕೆಲವರು ಈಗಾಗಲೇ ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡ ಸುದ್ದಿಯನ್ನು ಓದಿದ್ದೆವು. ಇದೀಗ 64 ವರ್ಷದ ವ್ಯಕ್ತಿಯೊಬ್ಬರು ಹೊರಕೆಯನ್ನು ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆ ನೀಡಲು ಚಿನ್ನದ ಲೇಪಿತ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತು ಹೈದರಾಬಾದ್ ಮೂಲದ ಚಾರ್ಲ ಶ್ರೀನಿವಾಸ್ ಶಾಸ್ತ್ರಿ ಎಂಬುವರು ಪಾದಯಾತ್ರೆ ಹೊರಟಿದ್ದಾರೆ. ಜನವರಿ 22 ರಂದು ಉದ್ಘಾಟನಾ ಸಮಾರಂಭಕ್ಕೂ ಮೊದಲು ಶ್ರೀನಿವಾಸ್ ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಚಾರ್ಲ ಶ್ರೀನಿವಾಸ್ ಶಾಸ್ತ್ರಿ ಅವರು ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವೆದುರುಪಾಕ ಗ್ರಾಮದಿಂದ ಬೆಳ್ಳಿಯಿಂದ ಮಾಡಿದ ಪಾದರಕ್ಷೆಗಳೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಯಾಣದ ಸಮಯದಲ್ಲಿ ಪಾದರಕ್ಷೆಗಳಿಗೆ ಚಿನ್ನದ ಲೇಪನ ಇರಬೇಕಿತ್ತು ಅಂತ ಅವರಿಗೆ ಅನಿಸಿದೆ. ಇದಾದ ಬಳಿಕ ಹೈದರಾಬಾದ್‌ನಲ್ಲಿರುವ ಅಕ್ಕಸಾಲಿಗರಿಗೆ ಪಾದರಕ್ಷೆಗಳನ್ನು ಕಳುಹಿಸಿ ಮಾರ್ಪಾಡು ಮಾಡಿಸಿದ್ದಾರೆ. ಚಿನ್ನದ ಲೇಪಿತ ಪಾದರಕ್ಷೆಗಳು ತಲಾ 12.5 ಕೆ.ಜಿ. ತೂಗುತ್ತವೆ. ಇದರ ಬೆಲೆ ಬರೋಬ್ಬರಿ 1.2 ಕೋಟಿ ರೂಪಾಯಿ. ಜನವರಿ 13ರೊಳಗೆ ಶಾಸ್ತ್ರಿ ಅಯೋಧ್ಯೆಗೆ ತಲುಪಲಿದ್ದಾರೆ. ಬಳಿಕ ಪಾದರಕ್ಷೆಗಳನ್ನು ದೇವಾಲಯದ ಒಳಗೆ ಇಡಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.