ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಪರಿಸ್ಥಿತಿಯು ಜಾಗತಿಕ ಆರ್ಥಿಕತೆಯ ಮೇಲೆ ‘ಮಹಾ ಬೆದರಿಕೆ’ ಒಡ್ಡಿದೆ ಎಂದು ಅಂತರಾಷ್ಟ್ರೀಯ ಇಂಧನ ಸಂಸ್ಥೆಯ (IEA) ಮುಖ್ಯಸ್ಥ ಫಾತಿಹ್ ಬಿರೋಲ್ ಸೋಮವಾರ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರಸಕ್ತ ಇಂಧನ ಬಿಕ್ಕಟ್ಟು 1970ರ ದಶಕದ ತೈಲ ಬಿಕ್ಕಟ್ಟು ಮತ್ತು 2022ರ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮಗಳಿಗಿಂತಲೂ ಭೀಕರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ವಿಶ್ವದ ಯಾವುದೇ ರಾಷ್ಟ್ರವೂ ಈ ಬಿಕ್ಕಟ್ಟಿನ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
1970ರ ದಶಕದಲ್ಲಿ ಸಂಭವಿಸಿದ ಸರಣಿ ತೈಲ ಬಿಕ್ಕಟ್ಟುಗಳ ಸಮಯದಲ್ಲಿ ದಿನಕ್ಕೆ 10 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆ ಸ್ಥಗಿತಗೊಂಡಿತ್ತು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಈಗಾಗಲೇ ದಿನಕ್ಕೆ 11 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆ ಕಡಿತಗೊಂಡಿದೆ. ಇದು ಇತಿಹಾಸದಲ್ಲೇ ಅತಿದೊಡ್ಡ ಇಂಧನ ಪೂರೈಕೆ ವ್ಯತ್ಯಯವಾಗಿದೆ.
ಮೂಲಸೌಕರ್ಯಗಳಿಗೆ ಹಾನಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಕಾರಣದಿಂದಾಗಿ ಸುಮಾರು 40ಕ್ಕೂ ಹೆಚ್ಚು ಇಂಧನ ಕೇಂದ್ರಗಳು (Energy Assets) ತೀವ್ರವಾಗಿ ಹಾನಿಗೊಳಗಾಗಿವೆ. ಯುದ್ಧ ನಿಂತರೂ ಇವುಗಳನ್ನು ಸರಿಪಡಿಸಿ ಪೂರೈಕೆ ಸಹಜ ಸ್ಥಿತಿಗೆ ತರಲು ಕನಿಷ್ಠ 6 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ವಿಶ್ವದ ಒಟ್ಟು ತೈಲ ಮತ್ತು ಗ್ಯಾಸ್ ಪೂರೈಕೆಯ ಶೇ. 20ರಷ್ಟು ಪಾಲು ಹೊಂದಿರುವ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು ಜಾಗತಿಕ ಇಂಧನ ಮಾರುಕಟ್ಟೆಯನ್ನು ಕಂಗೆಡಿಸಿದೆ. “ಜಲಸಂಧಿಯನ್ನು ಮುಕ್ತಗೊಳಿಸುವುದೊಂದೇ ಸದ್ಯದ ಏಕೈಕ ಪರಿಹಾರ” ಎಂದು ಬಿರೋಲ್ ಒತ್ತಿ ಹೇಳಿದ್ದಾರೆ.
ಏಷ್ಯಾ ರಾಷ್ಟ್ರಗಳು ತಮ್ಮ ಶೇ. 40ರಷ್ಟು ತೈಲವನ್ನು ಇದೇ ಮಾರ್ಗವಾಗಿ ಆಮದು ಮಾಡಿಕೊಳ್ಳುತ್ತವೆ. ಈ ಬಿಕ್ಕಟ್ಟು ಮುಂದುವರಿದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ (LPG) ಬೆಲೆಗಳು ಗಗನಕ್ಕೇರುವ ಆತಂಕವಿದೆ.ಪರಿಸ್ಥಿತಿ ಕೈಮೀರುತ್ತಿರುವುದರಿಂದ ವರ್ಕ್ ಫ್ರಮ್ ಹೋಮ್ (WFH), ಹೆದ್ದಾರಿಗಳಲ್ಲಿ ವಾಹನಗಳ ವೇಗ ಮಿತಿ ಕಡಿತ ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವ ಮೂಲಕ ಇಂಧನ ಉಳಿತಾಯ ಮಾಡಲು ಐಇಎ ಶಿಫಾರಸು ಮಾಡಿದೆ.








