ಮುಂಬೈ: ತುರ್ಕಿಯೆ ಮತ್ತು ಅಜೆರ್ಬೈಜಾನ್ ಜೊತೆಗಿನ ಎಲ್ಲಾ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (ಜಿಜೆಸಿ) ಶುಕ್ರವಾರ ಉದ್ಯಮವನ್ನು ಒತ್ತಾಯಿಸಿದೆ.
26 ಭಾರತೀಯ ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸಾರ್ವಜನಿಕ ಬೆಂಬಲ ನೀಡಿದ ತುರ್ಕಿ ಜೊತೆ ವ್ಯಾಪಾರ ನಿಲ್ಲಿಸಬೇಕು ಎಂದು ಜಿಜೆಸಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ರತ್ನ ಮತ್ತು ಆಭರಣ ವಲಯವು ರಾಷ್ಟ್ರದ ಬೆಂಬಲಕ್ಕೆ ಒಗ್ಗಟ್ಟಾಗಿ ನಿಂತಿದೆ. ವಾಣಿಜ್ಯಕ್ಕಿಂತ ದೇಶಕ್ಕೆ ಆದ್ಯತೆ ನೀಡುವ ಮೂಲಕ ನಮ್ಮ ಉದ್ಯಮವು ಬಲವಾದ ಉದಾಹರಣೆಯನ್ನು ನೀಡುವುದು ಕಡ್ಡಾಯವಾಗಿದೆ. ತುರ್ಕಿಯೆ ಮತ್ತು ಅಜೆರ್ಬೈಜಾನ್ ಜೊತೆಗಿನ ಎಲ್ಲಾ ವಹಿವಾಟುಗಳನ್ನು ನಿಲ್ಲಿಸುವಂತೆ ನಾವು ಪ್ರತಿ ಆಭರಣಕಾರರು, ತಯಾರಕರು, ವ್ಯಾಪಾರಿ ಮತ್ತು ಸಗಟು ವ್ಯಾಪಾರಿಗಳಿಗೆ ಕರೆ ನೀಡುತ್ತೇವೆ ಎಂದು ಜಿಜೆಸಿ ಅಧ್ಯಕ್ಷ ರಾಜೇಶ್ ರೋಕ್ಡೆ ಹೇಳಿದರು.
ವ್ಯಾಪಾರವನ್ನು ನಿಲ್ಲಿಸುವ ಮೂಲಕ, ನಾವು ಏಕತೆ ಮತ್ತು ಸಂಕಲ್ಪದ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತೇವೆ, ನಮ್ಮ ಉದ್ಯಮವನ್ನು ಬಲಪಡಿಸುತ್ತೇವೆ ಎಂದು ಅವರು ಹೇಳಿದರು.








