ನವದೆಹಲಿ : ಕೋವಿಡ್ -19ಗೆ ಬಲಿಯಾದವರ ಕುಟುಂಬಗಳಿಗೆ ಸಮಯವನ್ನ ವ್ಯರ್ಥ ಮಾಡದೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, “ಪರಿಹಾರವನ್ನ ಪಡೆಯದ ಹಕ್ಕುದಾರನಿದ್ದರೆ ಅಥವಾ ಅವ್ರ ಮನವಿಯನ್ನ ತಿರಸ್ಕರಿಸಿದ್ದರೆ, ಅವ್ರು ಈ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆ ನಿವಾರಣಾ ಸಮಿತಿಗೆ ದೂರು ಸಲ್ಲಿಸಬಹುದು” ಎಂದು ಹೇಳಿದೆ.
ಇನ್ನು ಇದೇ ವೇಳೆ ಕುಂದುಕೊರತೆ ನಿವಾರಣಾ ಸಮಿತಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ್ದು; ನಾಲ್ಕು ವಾರಗಳಲ್ಲಿ ದೂರು ಆಲಿಸಿ, ಪರಿಹಾರ ನೀಡಬೇಕು ಎಂದಿದೆ. ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ತನ್ನ ವೈಯಕ್ತಿಕ ಖಾತೆಗೆ ಹಣವನ್ನ ವರ್ಗಾಯಿಸಿದ ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ನಡೆಸಿತು. ಎರಡು ದಿನಗಳಲ್ಲಿ ಹಣವನ್ನ ಎಸ್ಡಿಆರ್ಎಫ್ ಖಾತೆಗೆ ಮರಳಿ ಜಮಾ ಮಾಡುವಂತೆ ನ್ಯಾಯಪೀಠ ಆದೇಶಿಸಿದೆ. “ಹಿಂದಿನ ಆದೇಶದ ಅಡಿಯಲ್ಲಿ ಅರ್ಹ ಜನರಿಗೆ ಒಂದು ನಿಮಿಷವೂ ವಿಳಂಬ ಮಾಡದೇ ಪರಿಹಾರವನ್ನ ಪಾವತಿಸುವುದನ್ನ ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡುತ್ತಿದ್ದೇವೆ” ಎಂದು ನ್ಯಾಯಪೀಠ ಹೇಳಿದೆ.