ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮದಲ್ಲಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ‘ಗೃಹಲಕ್ಷ್ಮಿ’ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಹಬ್ಬದ ಖರ್ಚಿಗೆ ಆಸರೆಯಾದಂತಾಗಿದೆ.
ಈ ಬಾರಿ ಬಾಕಿ ಇದ್ದ ಮೂರು ಕಂತುಗಳ ಹಣ ಒಟ್ಟಾಗಿ ಬಿಡುಗಡೆಯಾಗಿದ್ದು, ಅರ್ಹ ಮಹಿಳೆಯರ ಖಾತೆಗೆ ತಲಾ 6,000 ರೂ. ಜಮೆಯಾಗುತ್ತಿದೆ. ಈಗಾಗಲೇ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಗದಗ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಆಗಿದೆ.
ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಮುಂದಿನ 3 ದಿನಗಳ ಒಳಗಾಗಿ ಹಣ ತಲುಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚುರುಕಿನ ಕ್ರಮ ಕೈಗೊಂಡಿದೆ.
ಯುಗಾದಿ ಹಬ್ಬದ ಬೆನ್ನಲ್ಲೇ ರಂಜಾನ್ ಕೂಡ ಇರುವುದರಿಂದ, ಈ ಹಣ ಬಿಡುಗಡೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ದೊಡ್ಡ ಮಟ್ಟದ ನೆರವು ನೀಡಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಕಂತುಗಳು ಈಗ ಒಟ್ಟಾಗಿ ಬಂದಿರುವುದು ಗೃಹಿಣಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಗಮನಿಸಿ: ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ತಿಳಿಯಲು ನಿಮ್ಮ ಬ್ಯಾಂಕ್ ಪಾಸ್ಬುಕ್ ಅಪ್ಡೇಟ್ ಮಾಡಿ ಅಥವಾ ಅಧಿಕೃತ ‘ಡಿಬಿಟಿ ಕರ್ನಾಟಕ’ (DBT Karnataka) ಆಪ್ ಮೂಲಕ ಸ್ಟೇಟಸ್ ಪರಿಶೀಲಿಸಬಹುದು.








