ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಕೋರಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಾಸಕ ಸಿಟಿ ರವಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಗಣೇಶೋತ್ಸವ ಕುರಿತು ಪಕ್ಷದ ಯಾವ ನಾಯಕರೂ ತಮಗೆ ಮನವಿ ಮಾಡಿಲ್ಲ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದರು. ಆದರೆ ಈಗ ಸಿಟಿ ರವಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಚಾಮರಾಜಪೇಟೆಯ ಆಟದ ಮೈದಾನ ಕಂದಾಯ ಇಲಾಖೆಯ ಅಡಿಯಲ್ಲಿದ್ದರೂ ಸಿಟಿ ರವಿ ಕಂದಾಯ ಇಲಾಖೆಗೆ ಪತ್ರ ಬರೆಯದೇ ನೇರವಾಗಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಚಾಮರಾಜಪೇಟೆ ನಾಗರೀಕ ಒಕ್ಕೂಟದ ಮನವಿಯನ್ನು ಸಿಎಂಗೆ ರವಾನಿಸಿದ ಸಿ ಟಿ ರವಿ, ಈ ಮನವಿಯನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಕೋರಿದ್ದಾರೆ
ಚಾಮರಾಜಪೇಟೆ ಮೈದಾನದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಇಲ್ಲಿಯವರೆಗೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ಇತ್ತು. ಪ್ರಾರ್ಥನೆ ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳು ಇಲ್ಲಿಯವರೆಗೆ ನಡೆದಿರಲಿಲ್ಲ. ಈ ಆಟದ ಮೈದಾನದ ಆಸ್ತಿ ಯಾರಿಗೆ ಸೇರಿದ್ದು ಎನ್ನುವುದು ದೊಡ್ಡ ಪ್ರಶ್ನೆ ಆಗಿತ್ತು.
ವಕ್ಫ್ ಬೋರ್ಡ್ ಈ ಮೈದಾನಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆ ನೀಡದ ಕಾರಣ ಸರ್ಕಾರ ಈ ಭೂಮಿ ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ತಿಳಿಸಿತ್ತು. ಅಲ್ಲದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ಕಂದಾಯ ಇಲಾಖೆಯಿಂದಲೇ ಆಚರಿಸಲಾಗಿತ್ತು.