ಗದಗ : ಇತ್ತೀಚಿಗೆ ಕೊಪ್ಪಳ ಹಾಗೂ ಯಾದಗಿರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ನೀಡಬೇಕಾಗಿದ್ದ ಪೌಷ್ಠಿಕ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಘಟನೆ ನಡೆದಿತ್ತು. ಇದೀಗ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಬೇಕಾಗಿದ್ದ ಪೌಷ್ಟಿಕ ಆಹಾರವನ್ನು ಅಲ್ಲಿನ ಸಿಬ್ಬಂದಿಗಳೇ ಕದ್ದು ಸಾಗಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿನ ರೇಷನ್ ಅನ್ನು ಸಿಬ್ಬಂದಿಗಳು ತೆಗೆದುಕೊಂಡು ಹೋಗುತ್ತಿರುವಾಗ ಸ್ಥಳೀಯರು ಹಿಡಿದಿರುವಂತಹ ಘಟನೆ ನಡೆದಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಐವರು ಅಡುಗೆ ಸಹಾಯಕರಿಂದ ಪೌಷ್ಠಿಕ ಆಹಾರ ಸಾಗಾಟ ಮಾಡಲಾಗುತ್ತಿತ್ತು. 35 ಕೆಜಿ ಅಕ್ಕಿ, ಎರಡು ಕೆಜಿ ಬೇಳೆ, ಹಾಲಿನ ಪುಡಿಯ ಎರಡು ಪ್ಯಾಕೆಟ್, 10 ಕೆಜಿ ಗೋಧಿ ಪ್ಯಾಕೆಟ್ ಸಾಗಾಟ ಮಾಡಲಾಗುತಿತ್ತು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.