ಗದಗ : ಗದಗದಲ್ಲಿ ಟಂ ಟಂ ಚಾಲಕರು ಸಾರ್ವಜನಿಕವಾಗಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸೈಬರ್ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮತ್ತೊಬ್ಬ ಟಂಟಂ ಚಾಲಕ ಇದೆ ವೇಳೆ ಪರಾರಿಯಾಗಿದ್ದಾನೆ.
ಸಾರ್ವಜನಿಕವಾಗಿ ಜನನಿಬಿಡ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಟಂ ಟಂ ಚಾಲಕರ ಮೇಲೆ ಸಿಇಎನ್ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾದ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
ಸಿಇಎನ್ ಪೊಲೀಸ್ ಠಾಣೆಯ ಎಸ್. ಎಮ್. ಶಿರಗುಪ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಹುಲಕೋಟಿ ಗ್ರಾಮದ ಸಾಯಿ ನಗರ ನಿವಾಸಿಗಳಾದ ಟಂ ಟಂ ಚಾಲಕರಾದ ಮಣಿಕಂಠ ತಂದೆ ಕರಿಯಪ್ಪ ಕೊಂಡಿಕೊಪ್ಪ (22), ಹರೀಶ್ ತಂದೆ ಹನಮಂತಪ್ಪ ಹರಕುಣಿ (23) ಎಂಬ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮರಿಯಪ್ಪ ತಂದೆ ಕರಿಯಪ್ಪ ಕವಡಿಕಿ ಎಂಬ ಟಂ ಟಂ ಚಾಲಕ ಪರಾರಿಯಾಗಿದ್ದಾನೆ.
ಬಂಧಿತರಿಂದ 13,440 ರೂ. ಮೌಲ್ಯದ 448 ಗ್ರಾಮ ಗಾಂಜಾ ಹಾಗೂ ಟಂಟಂ ಜಪ್ತಿ ಮಾಡಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.