ಗದಗ : ಗದಗದಲ್ಲಿ ಬಿಚ್ಚಿ ಬಿಡಿಸುವಂತಹ ಜೋಡಿ ಆತ್ಮಹತ್ಯೆ ನಡೆದಿದ್ದು, ಇವತ್ತಿಗೆ ನಾಲ್ಕು ದಿನಗಳ ಹಿಂದೆ ಯುವತಿಗೆ ಬೇರೊಬ್ಬನ ಜೊತೆಗೆ ಮದುವೆಯಾಗಿತ್ತು. ನಾಲ್ಕು ದಿನಗಳ ನಂತರ ತವರಿಗೆ ಬಂದಿದ್ದ ಯುವತಿ ರಾತ್ರಿ ಮನೆಯವರಿಗೆ ತಿಳಿಸಿದೆ ರಾತ್ರೋರಾತ್ರಿ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಮರುದಿನ ನೋಡಿದರೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರಿಬ್ಬರ ಶವ ಪತ್ತೆಯಾಗಿತ್ತು.
ಹೌದು ಪರಸ್ಪರ ಪ್ರೀತಿ ಮಾಡಿ ಇಬ್ಬರು ಬಿಟ್ಟಿರಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ.ಅಪ್ಪಣ್ಣ ಗೊರಕಿ ಹಾಗೂ ಲಲಿತಾ ಹಲಗೇರಿ ಮೃತ ರ್ದುದೈವಿಗಳು ಎಂದು ತಿಳಿದುಬಂದಿದೆ. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ, ಕುಟುಂಬಸ್ಥರಿಗೆ ಹಾಗೂ ತಮ್ಮ ಸ್ನೇಹಿತರ ಮುಂದೆ ಕೂಡ ತಮ್ಮ ಪ್ರೀತಿ-ಪ್ರೇಮದ ವಿಷಯವನ್ನು ಹೇಳಿರಲಿಲ್ಲ. ಈ ಹಿನ್ನಲೆ ಲಲಿತಾ ಕುಟುಂಬಸ್ಥರು ಏಪ್ರಿಲ್ 4 ರಂದು ಬೇರೆ ಯುವಕನ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ.
ನಾಲ್ಕೈದು ದಿನ ಗಂಡನ ಮನೆಯಲ್ಲಿದ್ದು, ತವರೂ ಮನೆಗೆ ಬಂದಿದ್ದ ಲಲಿತಾ, ನಿನ್ನೆ ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಹೆತ್ತವರಿಗೆ ಕಣ್ಣುತಪ್ಪಿಸಿ ಮನೆಯಿಂದ ಹೊರಗಡೆ ಹೋಗಿದ್ದಾಳೆ.ಯುವಕ ಅಪ್ಪಣ್ಣ ಕೂಡ ರಾತ್ರಿ 10 ಗಂಟೆಗೆ ಮನೆಯನ್ನು ಬಿಟ್ಟಿದ್ದಾನೆ. ಪಕ್ಕಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಯೇ ಹಗ್ಗವನ್ನು ತೆಗೆದುಕೊಂಡು ಹೋಗಿದ್ದಾರೆ. ಅದರಂತೆ ಹಗ್ಗದಿಂದ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೇಮಿಗಳ ಆತ್ಮಹತ್ಯೆಯಿಂದ ಇಡೀ ನರೇಗಲ್ ಪಟ್ಟಣವೇ ಬೆಚ್ಚಿಬಿದ್ದಿದ್ದು, ಮದುವೆಯಾಗಿ ಒಂದೇ ವಾರದಲ್ಲಿ ಯುವತಿ, ಪ್ರಿಯಕರನ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎರಡು ಕಡೇ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಆತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಾಗಬೇಕಾಗಿದೆ.