ನವದೆಹಲಿ:ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪರಿಷ್ಕರಿಸಿದ್ದರೂ ಸಹ, ಸಾಮಾನ್ಯ ಗ್ರಾಹಕರ ಮೇಲೆ ಅದರ ಹೊರೆ ಬೀಳುವುದಿಲ್ಲ ಎಂದು ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.
ಸರ್ಕಾರವು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರೂ, ತೈಲ ಕಂಪನಿಗಳು ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದಿರಲು ನಿರ್ಧರಿಸಿವೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
“ಅಬಕಾರಿ ಸುಂಕದ ಪರಿಷ್ಕರಣೆಯಿಂದ ಚಿಲ್ಲರೆ ಮಾರಾಟ ದರದ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಹಕರು ಈ ಮೊದಲಿನ ದರದಲ್ಲೇ ಇಂಧನವನ್ನು ಪಡೆಯಲಿದ್ದಾರೆ” ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿರುವ ಲಾಭವನ್ನು ಸರ್ಕಾರದ ಬೊಕ್ಕಸಕ್ಕೆ ಬಳಸಿಕೊಳ್ಳಲು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಈ ಸುಂಕ ಪರಿಷ್ಕರಣೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.








