ವಿಶಾಖಪಟ್ಟಣಂ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಉದ್ವಿಗ್ನತೆಯಿಂದಾಗಿ ಏರುತ್ತಿರುವ ವಿಮಾನ ಇಂಧನ (ATF) ಬೆಲೆಗಳ ನೇರ ಪರಿಣಾಮವು ಏಪ್ರಿಲ್ 1 ರಿಂದ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ವಿಮಾನ ಇಂಧನದ ಬೆಲೆಗಳನ್ನು ಪ್ರತಿ ತಿಂಗಳ ಒಂದನೇ ತಾರೀಖಿನಂದು ನಿರ್ಧರಿಸಲಾಗುತ್ತದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಿಂದಾಗಿ ಏಪ್ರಿಲ್ 1 ರ ಪರಿಷ್ಕರಣೆಯಲ್ಲಿ ಬೆಲೆ ಏರಿಕೆಯಾಗುವ ಲಕ್ಷಣಗಳಿದ್ದು, ಅದರ ಪ್ರಭಾವ ವಿಮಾನಯಾನ ಕ್ಷೇತ್ರದ ಮೇಲೆ ಬೀಳಲಿದೆ ಎಂದು ಸಚಿವರು ವಿವರಿಸಿದರು.
“ಇಂಧನ ಬೆಲೆ ಏರಿಕೆಯ ಪ್ರಭಾವವು ವಿಮಾನಯಾನ ಸಂಸ್ಥೆಗಳ ಕಾರ್ಯಚರಣೆ ಅಥವಾ ಪ್ರಯಾಣಿಕರ ಮೇಲೆ ನೇರವಾಗಿ ಬೀಳಬಾರದು ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ನಾವು ವಿಮಾನಯಾನ ಸಂಸ್ಥೆಗಳೊಂದಿಗೆ ಸತತ ಮಾತುಕತೆ ನಡೆಸುತ್ತಿದ್ದೇವೆ,” ಎಂದು ಸಚಿವರು ಭರವಸೆ ನೀಡಿದರು. ಈ ಬಿಕ್ಕಟ್ಟನ್ನು ಎದುರಿಸಲು ನಾಗರಿಕ ವಿಮಾನಯಾನ ಸಚಿವಾಲಯವು ವಿದೇಶಾಂಗ ಇಲಾಖೆ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪಶ್ಚಿಮ ಏಷ್ಯಾ ಮಾರ್ಗಗಳಲ್ಲಿ ವಿಮಾನಗಳ ಸುರಕ್ಷಿತ ಸಂಚಾರವೇ ನಮ್ಮ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ನಿಯಂತ್ರಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.








