ಮೈಸೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ಈ ವರ್ಷ ನವೆಂಬರ್ ಅಲ್ಲಿ ಪೂರೈಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನನ್ನ ಇಲಾಖೆ ತುಂಬಾ ದೊಡ್ಡದು. ಮುಖ್ಯಮಂತ್ರಿಗಳು ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಟಫ್ ಇಲಾಖೆ ಕೊಡಿ ಅಂತ ಹೇಳಿದರು. ಇದಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಒಪ್ಪಿದರು. ಡಿಕೆ ಶಿವಕುಮಾರ್ ಅವರು ನಮ್ಮ ತಂದೆಯವರಿಗೆ ಆತ್ಮೀಯರು. ನನ್ನ ಇಲಾಖೆ ಸವಾಲಿನ ಇಲಾಖೆ, ಸಮಸ್ಯೆಗಳೂ ಇವೆ ಎಂದರು.
ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದರೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಲಿದೆ. ಎಷ್ಟೋ ಶಾಲೆಗಳು ವಿದ್ಯುತ್ ಬಿಲ್‌ಗೆ ಹೆದರಿ ಕಂಪ್ಯೂಟರ್ ಬಳಸುತ್ತಿಲ್ಲ. ಇದೀಗ ಇದೆಲ್ಲಕ್ಕೂ ಸಹಾಯವಾಗಲಿದೆ. ಇನ್ನು ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಹಾಲಿನಲ್ಲಿ ರಾಗಿ ಮಾಲ್ಟ್ ಹಾಕಿ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳೇ 58,000 ಶಾಲೆಗಳಿವೆ. ಒಟ್ಟು 1.20 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣದಲ್ಲಿ ಅವಕಾಶ ಬಹಳ ಮುಖ್ಯ. ಮೂರು ಪರೀಕ್ಷೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ದ್ವಿತೀಯ ಪಿಯುಸಿಯಲ್ಲಿ ಮೂರನೇ ಪರೀಕ್ಷೆಗೆ 1.20 ಲಕ್ಷ ವಿದ್ಯಾರ್ಥಿಗಳು ಹಾಜರಾದರು. ಈ ಪೈಕಿ 42,000 ವಿದ್ಯಾರ್ಥಿಗಳು ಪಾಸಾದರು. ಎಸ್‌ಎಸ್‌ಎಲ್‌ಸಿಗೂ ಇದೇ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಮಾರ್ಕ್ಸ್ ಕಾರ್ಡ್‌ನಲ್ಲಿ ಸಪ್ಲಿಮೆಂಟರಿ ಅನ್ನುವ ಪದ ಬಳಕೆ ನಿಷೇಧಿಸಿದ್ದೇವೆ ಎಂದು ಮಾಹಿತಿ ನೀಡಿದರು.