ಪ್ಯಾರಿಸ್: ಉತ್ತರ ಫ್ರಾನ್ಸ್ನ ಪಾಸ್-ಡೆ-ಕಲೈಸ್ (Pas-de-Calais) ಪ್ರದೇಶದಲ್ಲಿ ಇಂದು (ಏಪ್ರಿಲ್ 7, 2026) ಬೆಳಿಗ್ಗೆ ಭೀಕರ ರೈಲು ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಚಲಿಸುವ ಟಿಜಿವಿ (TGV) ರೈಲು ಹಳಿಯ ಮೇಲೆ ಸಿಲುಕಿಕೊಂಡಿದ್ದ ಮಿಲಿಟರಿ ಉಪಕರಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು 16 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಳಿಗ್ಗೆ ಸುಮಾರು 7:00 ಗಂಟೆಗೆ ಡಂಕಿರ್ಕ್ನಿಂದ ಪ್ಯಾರಿಸ್ಗೆ ಸುಮಾರು 250 ಪ್ರಯಾಣಿಕರೊಂದಿಗೆ ಸಾಗುತ್ತಿದ್ದ ಹೈ-ಸ್ಪೀಡ್ ರೈಲು, ಬುಲ್ಲಿ-ಲೆಸ್-ಮೈನ್ಸ್ (Bully-les-Mines) ಎಂಬಲ್ಲಿ ಲೆವೆಲ್ ಕ್ರಾಸಿಂಗ್ ದಾಟುತ್ತಿದ್ದ ಸೇನಾ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ತೀವ್ರತೆಗೆ ರೈಲಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, 56 ವರ್ಷದ ರೈಲು ಚಾಲಕ ಸಾವನ್ನಪ್ಪಿದ್ದಾರೆ. ರೈಲ್ವೆ ಅಧಿಕಾರಿಗಳು ಈ ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ 16 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಉಳಿದ 11 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತದ ಹಿನ್ನೆಲೆಯಲ್ಲಿ ಬೆಥೂನ್ ಮತ್ತು ಲೆನ್ಸ್ ಮಾರ್ಗಗಳ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫ್ರಾನ್ಸ್ ಸಾರಿಗೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








