ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಬೈಕ್ ಗೆ ಲಾರಿ ಡಿಕ್ಕಿ : ಪ್ರಿಯಕರ ಸಾವು, ಯುವತಿಗೆ ಗಾಯ
ಅದರಂತೆ ಇಂದು ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಯುವತಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಟಿ.ಬೇಗೂರು ಬಳಿ ಅಪಘಾತ ಸಂಭವಿಸಿದೆ.
ಯುವಕ ಮತ್ತು ಯುವತಿ ಟ್ರಿಪ್ ಮುಗಿಸಿ ವಾಪಸ್ ಬರುತ್ತಿದ್ದರು.ತುಮಕೂರಿನ ಮಂದಾರ ಗಿರಿಯಿಂದ ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ. ಕೊಪ್ಪಳದ ಜೇಮ್ಸ್ (23) ಮೃತ ಯುವಕ ಎಂದು ಹೇಳಲಾಗುತ್ತಿದ್ದು, ಚೈತ್ರ (23)ಗೆ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಅಪಘಾತ ಬಳಿಕ ಲಾರಿ ನಿಲ್ಲಿಸದೆ ಚಾಲಕ ಪರಾರಿ ಆಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್-ಸರ್ಕಾರಿ ಬಸ್ ಮಧ್ಯ ಅಪಘಾತ : ಇಬ್ಬರ ರೈತರ ಸಾವು
ಬಿತ್ತನೆ ಬೀಜ ಖರೀದಿಸಿ ಊರಿಗೆ ಬರುವಾಗಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ರೈತರು ದುರ್ಮರಣ ಹೊಂದಿರುವಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ನಡೆದಿದೆ. ಹಳ್ಳಿಗುಡಿ ಗ್ರಾಮದ ರೈತ ಪರಸಪ್ಪ ಜೋಗಿನ ಹಾಗೂ ಪೇಟಾಲೂರು ಗ್ರಾಮದ ಮಾರುತಿ ಯಾಟಿ ಮೃತರು ಎಂದು ತಿಳಿದುಬಂದಿದೆ.ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು, ಯುವತಿಯ ನಾಲಿಗೆ ಕಟ್!
ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ನ ಹಿಂಬದಿ ಕುಳಿತಿದ್ದ ಯುವತಿಯ ನಾಲಿಗೆ ಕಟ್ ಆಗಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ 26 ವರ್ಷದ ಶಿವರಾಜ್ ದುರ್ಮರಣ. ಲಾವಣ್ಯ(20) ನಾಲಿಗೆ ಕಳೆದುಕೊಂಡ ಯುವತಿ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.