ಬೆಂಗಳೂರು: ರಾಜ್ಯದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೈಲಿಗಲ್ಲೊಂದಕ್ಕೆ ಇಂದು ಮುನ್ನುಡಿ ಬರೆಯಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ (4ನೇ ಹಂತ) ಕರ್ನಾಟಕ ಗೃಹಮಂಡಳಿಯ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ, ದೇಶದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಇಂದು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೃಹತ್ ಯೋಜನೆಗೆ ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
80,000 ಆಸನ ಸಾಮರ್ಥ್ಯ
ಈ ನೂತನ ಸ್ಟೇಡಿಯಂ ಒಟ್ಟು 80,000 ಆಸನಗಳ ಸಾಮರ್ಥ್ಯವನ್ನು ಹೊಂದಿರಲಿದೆ. ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ (1.32 ಲಕ್ಷ ಸೀಟುಗಳು) ಬಿಟ್ಟರೆ, ಇದು ದೇಶದಲ್ಲೇ 2ನೇ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಅಮೆರಿಕದ ಎಟಿ&ಟಿ ಸ್ಟೇಡಿಯಂ ಪ್ರೇರಣೆ
ಅಮೆರಿಕದ ಟೆಕ್ಸಾಸ್ನಲ್ಲಿರುವ ಪ್ರಸಿದ್ಧ ‘ಎಟಿ ಆಂಡ್ ಟಿ’ (AT&T) ಸ್ಟೇಡಿಯಂ ಹಾಗೂ ‘ಲ್ಯೂಕಾಸ್ ಆಯಿಲ್’ ಸ್ಟೇಡಿಯಂ ಮಾದರಿಯಿಂದ ಪ್ರೇರಣೆ ಪಡೆದು ಈ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ಅನ್ನು ವಿನ್ಯಾಸಗೊಳಿಸಲಾಗಿದೆ.
ಸೂರ್ಯ ಕ್ರೀಡಾ ಗ್ರಾಮ: ಈ ಇಡೀ ಕ್ರೀಡಾ ಸಂಕೀರ್ಣಕ್ಕೆ ‘ಕೆಂಪೇಗೌಡ ಸೂರ್ಯ ಕ್ರೀಡಾ ಗ್ರಾಮ’ ಎಂದು ನಾಮಕರಣ ಮಾಡಲಾಗಿದೆ. ಮೊದಲ ಹಂತದಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಕ್ರಿಕೆಟ್ ಇತಿಹಾಸ ಬಿಂಬಿಸುವ ಭವ್ಯ ಮುಂಭಾಗದ ವಿನ್ಯಾಸದೊಂದಿಗೆ ಮುಖ್ಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ.
ಎರಡನೇ ಹಂತ: ಮುಂದಿನ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ (Indoor Stadium), ಈಜುಕೊಳ ಹಾಗೂ ಬೃಹತ್ ಸಮಾವೇಶ ಸಭಾಂಗಣಗಳನ್ನು (Convention Halls) ನಿರ್ಮಿಸಲು ಯೋಜಿಸಲಾಗಿದೆ.








